

ಶಿವಮೊಗ್ಗ: ಶೀಘ್ರವೇ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಈ ಮೂಲಕ ಮುಂಬರುವ ಎಲ್ಲ ಚುನಾವಣೆಗಳಿಗೆ ತಯಾರಿ ನಡೆಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಶ್ರೀಕಾಂತ್ ಹೇಳಿದರು.
ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಭಾನುವಾರ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿ ಶಾರದಾ ಪೂರ್ಯಾನಾಯ್ಕ್ ಅವರಿಗೆ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರ ಎಂಬುದು ನಿರ್ದಿಷ್ಟವಾಗಿ ಒಬ್ಬರೇ ಅನುಭವಿಸುವುದಲ್ಲ. ಎರಡು, ಮೂರು ವರ್ಷಕ್ಕೊಮ್ಮೆ ಪದಾಧಿಕಾರಿಗಳ ಆಯ್ಕೆ ನಡೆಸಬೇಕಾಗುತ್ತದೆ. ಆ ಮೂಲಕ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಕಾರ್ಯಕರ್ತರು, ಜನರ ಸಮಸ್ಯೆಗಳನ್ನು ಬರೀ ಆಲಿಸುವುದಷ್ಟೇ ಅಲ್ಲ, ಸಾಧ್ಯವಾದರೆ ಕೆಲಸವನ್ನೂ ಮಾಡಿಕೊಡಬೇಕು ಎಂದರು.
ಜಿಲ್ಲೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಶಿವಮೊಗ್ಗ ಗ್ರಾಮಾಂತರ ಮಾತ್ರ ನಮ್ಮ ಕೈಹಿಡಿದಿದೆ. ಶಿವಮೊಗ್ಗ ನಗರದಲ್ಲಿ ಸೋತಿದ್ದಕ್ಕೆ ಆಯನೂರು ಮಂಜುನಾಥ ಅವರಿಗೂ ಬೇಸರವಿಲ್ಲ. ಆದರೆ ಕಡಿಮೆ ಮತಗಳು ಬಂದಿದ್ದಕ್ಕೆ ಬೇಸರವಾಗುತ್ತಿದೆ. ಪಕ್ಷದ ಮತಗಳೇ 30ರಿಂದ 35 ಸಾವಿರ ಇದ್ದವು. ಅಷ್ಟೂ ಮತಗಳು ಬರಲಿಲ್ಲ. ಭದ್ರಾವತಿಯಲ್ಲಿ ಬಿಜೆಪಿಗೆ ಮೊದಲ ಬಾರಿ 20 ಸಾವಿರ ಮತಗಳು ಬಂದಿದ್ದು ಅಚ್ಚರಿ ತಂದಿದೆ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದರು.