

ಬೇಲೂರು: ಸಂವಿಧಾನದ ಆಶಯದಂತೆ ವಸತಿ ರಹಿತರಿಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರಗಳನ್ನು ವಿತರಿಸುತ್ತಿದ್ದು, ಸರ್ಕಾರದ ಸೌಲಭ್ಯವನ್ನು ಸರಿಯಾಗಿ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ತಾಲೂಕು ಪಂಚಾಯಿತಿಯಿಂದ ಆಯೋಜಿಸಿದ್ದ 2024-25ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರಗಳನ್ನು ವಿತರಿಸಿ ಮಾತನಾಡಿ, ಹಲವು ವರ್ಷಗಳಿಂದ ವಸತಿ ರಹಿತರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸರ್ಕಾರದ ಆದೇಶದಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ರಹಿತ ಅರ್ಹರನ್ನು ಆಯ್ಕೆ ಮಾಡಿ ಮಧ್ಯವರ್ತಿಗಳಿಲ್ಲದೆ ಯಾರಿಗೂ ನಯಾಪೈಸೆ ಕೊಡದಂತೆ ಫಲಾನುಭವಿಗಳಿಗೆ ನೇರವಾಗಿ ಯಾವುದೇ ಪಕ್ಷಪಾತವಿಲ್ಲದೆ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಅರ್ಹರನ್ನು ಗುರುತಿಸಿ ಮನೆಗಳನ್ನು ಕಟ್ಟಿಕೊಳ್ಳಲು ಕಾರ್ಯಾದೇಶ ಪತ್ರ ನೀಡುತಿದ್ದೇವೆ ಎಂದು ತಿಳಿಸಿದರು.
ಆದರೆ ರಾಜ್ಯ ಸರ್ಕಾರದಿಂದ ಇಲ್ಲಿವರೆಗೂ ಒಂದೇ ಒಂದು ಮನೆ ಬಂದಿಲ್ಲ. ಮುಂದಿನ ದಿನಗಳಲ್ಲಿ ಬಂದರೆ ಪುನಃ ಅರ್ಹರಿಗೆ ಕೊಡಲಾಗುವುದು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ದೊರಕಿಸಿ ಕೊಡಬೇಕೆಂಬ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಮತ್ತು ಸರ್ಕಾರದ ಸೌಲಭ್ಯವನ್ನು ಪಡೆದವರು ಉತ್ತಮ ಜೀವನಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ಇಒ ವಸಂತ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕಳೆದ ಬಾರಿ ಸರ್ವೇ ನಡೆಸಿದ ಸಂದರ್ಭ ವಸತಿ ರಹಿತರನ್ನು ಗುರುತಿಸಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಂದಿದ್ದ ಮನೆಗಳನ್ನು ಕೆಲವರು ಕಟ್ಟಿಕೊಂಡಿದ್ದಾರೆ. ಇನ್ನುಳಿದಂತೆ 2018-19ರಲ್ಲಿ ಸಮೀಕ್ಷೆ ನಡೆಸಿದ ಸಂದರ್ಭ ಆಯ್ಕೆಯಾದ ತಾಲೂಕಿನಲ್ಲಿರುವ 1500 ವಸತಿ ರಹಿತ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ನೀಡಲಾಗುತ್ತಿದೆ. ಈಗ ಪುನಃ ಮನೆಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸುವುದಕ್ಕೆ ಸರ್ಕಾರದಿಂದ ಆದೇಶ ಬಂದಿದೆ. ಸಮೀಕ್ಷೆ ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದರು.
ಕಳ್ಳೇರಿ ಗ್ರಾಪಂ ಅಧ್ಯಕ್ಷ ಅಬ್ದುಲ್ ಹಕೀಂ, ಬಿಕ್ಕೋಡು ಗ್ರಾಪಂ ಅಧ್ಯಕ್ಷ ಹೇಮರಾಜ್, ಸನ್ಯಾಸಿಹಳ್ಳಿ ಗ್ರಾಪಂ ಅಧ್ಯಕ್ಷ ಶ್ರೀಧರ್, ಇಬ್ಬೀಡು ಗ್ರಾಪಂ ಅಧ್ಯಕ್ಷ ಮಂಜುನಾಥ್, ಚನ್ನಬಸಮ್ಮ,ರುಬಿನಾ ಇತರರು ಇದ್ದರು.