

ತಿ.ನರಸೀಪುರ: ತಾಲೂಕಿನ ಸೋಸಲೆ ಗ್ರಾಮದ ಗ್ರಾಮ ಪಂಚಾಯಿತಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಬಸವ, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪ್ರಧಾನ ಮಂತ್ರಿ ಅವಾಜ್ ವಸತಿ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.
2022-23 ನೇ ಸಾಲಿನಲ್ಲಿ ಬಸವ ವಸತಿ ಯೋಜನೆ(ಹೆಚ್ಚುವರಿ) ಯಡಿ 50 ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಯೋಜನೆ(ಹೆಚ್ಚುವರಿ)ಯಡಿ ಮಂಜೂರಾಗಿದ್ದ 50 ಮನೆಗಳಿಗೆ ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಲು ಮತ್ತು ಪ್ರಧಾನ ಮಂತ್ರಿ ಅವಾಜ್ ಯೋಜನೆಗೆ ಸೀನಿಯಾರಿಟಿ ಆಧಾರದ ಮೇಲೆ 186ಕ್ಕೂ ಹೆಚ್ಚು ಫಲಾನುಭವಿಗಳ ಪಟ್ಟಿಗೆ ಅನುಮೋದನೆ ಪಡೆಯಲು ಅಧ್ಯಕ್ಷೆ ಎನ್.ಶೈಲಜಾ ಮಹೇಶ್ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ಆಯೋಜಿಸಲಾಗಿತ್ತು. ಫಲಾನುಭವಿಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರಕಟಿಸಿ, ಗ್ರಾಮಸ್ಥರ ಒಪ್ಪಿಗೆ ಪಡೆಯುವ ಮೂಲಕ ಮೂರು ವಸತಿ ಯೋಜನೆಗಳಿಗೆ ಅರ್ಹರನ್ನು ಪಾರದರ್ಶಕವಾಗಿ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿ.ಪುಟ್ಟಸ್ವಾಮಿ ಮಾತನಾಡಿ, ಫಲಾನುಭವಿಗಳ ಬಗ್ಗೆ ಯಾವುದೇ ಆಕ್ಷೇಪಗಳಿದ್ದರೂ ಗ್ರಾಮ ಸಭೆಯಲ್ಲಿ ಮುಕ್ತವಾಗಿ ತಕರಾರು ಸಲ್ಲಿಸಬಹುದು. ಪಟ್ಟಿಯಿಂದ ಕೈ ಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳು ನಿಗದಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಮುಂದಿನ ವಸತಿ ಯೋಜನೆಯಡಿ ಅಂತಹವರಿಗೆ ಮೊದಲ ಆದ್ಯತೆ ನೀಡಲಾಗುವುದು. ವಸತಿ ಯೋಜನೆಗಳ ಹಂಚಿಕೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಪ್ರಧಾನಮಂತ್ರಿ ಅವಾಜ್ ಯೋಜನೆಗೆ ಆನ್‌ಲೈನ್ ಅರ್ಜಿಗಳ ಮೂಲಕ ಫಲಾನುವಿಗಳನ್ನು ಆಯ್ಕೆ ಮಾಡಲಾಗಿದ್ದು, ಸಭೆಯಲ್ಲಿ ಅನುಮೋದನೆಗೆ ಪ್ರಸ್ತಾಪಿಸಲಾಗಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್.ಶೈಲಜಾ ಮಹೇಶ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ವಸತಿ ಯೋಜನೆಗಳ ಮಂಜೂರಾತಿಯಲ್ಲಿ ಹೆಚ್ಚಿನ ಮನೆಗಳನ್ನು ಮಂಜೂರು ಮಾಡಿದೆ. ವಸತಿ ರಹಿತರಿಗೆ ಸೂರು ಕಲ್ಪಿಸಲು ಉತ್ತಮವಾದ ಅವಕಾಶವನ್ನು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳಿಗೆ ಮಾಡಿಕೊಟ್ಟಿದ್ದು, ಅನಗತ್ಯ ಆಕ್ಷೇಪ, ಗೊಂದಲಕ್ಕೆ ಅವಕಾಶ ನೀಡದೆ ಎಲ್ಲರಿಗೂ ವಸತಿ ಯೋಜನೆಯನ್ನು ಕಲ್ಪಿಸಲು ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ದ್ವಿತೀಯ ದರ್ಜೆ ಸಹಾಯಕಿ ಟಿ.ಆರ್.ಶಿಲ್ಪಾ ಮಂಡಿಸಿದರು. ಅಲ್ಲದೇ, 2025-26 ನೇ ಸಾಲಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ತಯಾರಿಸಲಾದ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಯಿತು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಡಿ.ರಾಜೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಪುಟ್ಟಸ್ವಾಮಿ, ಎನ್.ನಾಗೇಂದ್ರ, ಎಂ.ಭಾಗ್ಯಾ, ಸುವರ್ಣಾ, ಎಸ್. ಎನ್ .ಮಧುಸೂದನ್, ಎಂ.ಮಹೇಶ್, ಎಸ್.ವಿ.ಮಹೇಶ್ ಕುಮಾರ್, ನಾಗರತ್ನಾ, ಆರ್.ಮಲ್ಲೇಶ, ರಾಜಮ್ಮ, ಪಿ.ಜ್ಞಾನೇಂದ್ರ, ಸುಂದರ, ಎಸ್.ಹೇಮಾ, ಎಂ.ಚಾಂದಿನಿ, ಆಶಾ, ಸಿ.ನಾರಾಯಣ, ಎಸ್.ವಿ.ಮಂಜುನಾಥ್, ಮಾಜಿ ಅಧ್ಯಕ್ಷ ಬಿಎಸ್ ಮಹೇಶ (ಲೋಕು), ಮಾಜಿ ಉಪಾಧ್ಯಕ್ಷ ಎಸ್.ಎಂ.ಚಿನ್ನಸ್ವಾಮಿ, ಮಾಜಿ ಸದಸ್ಯ ಮಲ್ಲುರಾಜಣ್ಣ, ಮುಖಂಡರಾದ ಶಿವಕುಮಾರ್(ಬಡ್ಡು), ಎ.ನಾಗರಾಜು, ಬಸವರಾಜು, ಪುಟ್ಟಸ್ವಾಮಿ ಇದ್ದರು.