

ಬೆಂಗಳೂರು: ಅಮೃತ ಮಹೋತ್ಸವ ವರ್ಷಾಚರಣೆ ಕಂಡಿರುವ ಯಲಹಂಕ ತಾಲೂಕಿನ ಬ್ಯಾಟರಾಯನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ (ಪ್ಯಾಕ್ಸ್) 2025-30ರ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಹೊಸದಾಗಿ 12 ಮಂದಿ ಚುನಾಯಿತರಾಗಿದ್ದಾರೆ.
ಕಳೆದ ಜ.19ರಂದು ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆದಿತ್ತು. ಮತ ಹಕ್ಕು ವಂಚಿತರಾಗಿದ್ದ ಸಾವಿರಕ್ಕೂ ಹೆಚ್ಚು ಮಂದಿ ಮತದಾನದ ಮುನ್ನ ದಿನ ನ್ಯಾಯಾಲಯದಿಂದ ಆದೇಶ ತಂದು ಮತ ಹಕ್ಕು ಪಡೆದಿದ್ದರು. ಇವರ ಮತವನ್ನು ಎಣಿಕೆ ಮಾಡದಂತೆ ಷರತ್ತು ವಿಧಿಸಿದ್ದರಿಂದ ನಂತರದ ದಿನಗಳಲ್ಲಿ ಕೋರ್ಟ್‌ನಲ್ಲಿ ವಿಚಾರಣೆ ನಡೆದು ಶನಿವಾರ (ಫೆ.22) ಮತ ಎಣಿಗೆ ಅವಕಾಶ ಮಾಡಿಕೊಡಲಾಗಿತ್ತು.
ಬಣ ರಾಜಕೀಯ ಮಧ್ಯೆಯೂ ಗೆದ್ದ ಬಿಜೆಪಿ ಬೆಂಬಲಿಗರು:
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಎರಡು ಬಣಗಳು ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿದ್ದವು. ಈ ಬೆಳವಣಿಗೆ ಕ್ಷೇತ್ರದ ಬಿಜೆಪಿ ಪಾಳಯದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿತ್ತು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ತಮ್ಮೇಶ್‌ಗೌಡ ಹಾಗೂ ಬಯಪಾ ಮಾಜಿ ಅಧ್ಯಕ್ಷ ಎ.ರವಿ ಬಣದೊಂದಿಗೆ ಬಿಜೆಪಿ ಬೆಂಬಲಿಗರು ಗುರುತಿಸಿಕೊಂಡಿದ್ದರು. ಒಟ್ಟು 12 ಸ್ಥಾನಗಳಲ್ಲಿ ಈ ಎರಡೂ ಬಣಗಳು ಕ್ರಮವಾಗಿ 2 ಹಾಗೂ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಬಣ ರಾಜಕೀಯ ಲಾಭ ಪಡೆಯಲು ಯತ್ನಿಸಿದ್ದ ಕಾಂಗ್ರೆಸ್ ಬೆಂಬಲಿಗರು ಮೂರು ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಯಿತು.
ನಿರ್ದೇಶಕ ಸ್ಥಾನಕ್ಕೆ ಆಯ್ಕೆಯಾದವರು:
ಎ.ಮೋಹನ್‌ರಾಜ್, ಎನ್.ಅಶೋಕ್‌ಗೌಡ, ಎನ್.ಮಂಜುನಾಥ್, ಎಸ್.ಮುನೇಗೌಡ, ಎ.ಶ್ರೀನಾಥ್, ಸಿ.ಭಾಸ್ಕರ್ (ಎಲ್ಲರೂ ಸಾಮಾನ್ಯ ವರ್ಗ). ಬಿ.ಎಸ್.ರಾಜಶೇಖರ್ (ಹಿಂದುಳಿದ ವರ್ಗ ‘ಎ’), ಎಲ್.ಕಾಂತರಾಜು (ಹಿಂದುಳಿದ ವರ್ಗ ‘ಬಿ’), ಎಸ್.ಸೋಮಶೇಖರ್ (ಎಸ್‌ಸಿ), ಜಿ.ಕೆ.ಕಾರ್ತಿಕ್ (ಎಸ್‌ಟಿ), ಸರೋಜಮ್ಮ, ಕೆ.ಅನುರಾಧ (ಮಹಿಳಾ ಮೀಸಲು). ಮತದಾನದ ಬಳಿಕ ಚುನಾವಣಾಧಿಕಾರಿ ಜಿ.ಟಿ.ಸುಂದರರಾಜು ಅವರು ಅಧಿಕೃತವಾಗಿ ವಿಜೇತರ ಹೆಸರನ್ನು ಘೋಷಿಸಿದರು.