

ಚನ್ನರಾಯಪಟ್ಟಣ : ಪಟ್ಟಣದ ನವೋದಯ ವಿದ್ಯಾ ಸಂಘದ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ 36 ಸ್ಪರ್ಧಿಗಳ ಪೈಕಿ 13 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಒಟ್ಟು 2584 ಮತದಾರರಿದ್ದು, 2188 ಜನರು ಮತದಾನ ಮಾಡಿದರು. ಕಡ್ಡಾಯವಾಗಿ ಗುರುತಿನ ಚೀಟಿಯ ಮೂಲಕವೇ ಮತದಾನ ಮಾಡಲು ಅವಕಾಶ ಮಾಡಿಕೊಡಲಗಿತ್ತು. ಯಾವುದೇ ಗೊಂದಲಗಳಿಗೆ ಅವಕಾಶ ವಾಗದಂತೆ ಮತದಾನ ನಡೆಯಿತು.
ಗಿರೀಶ್- 1289 ಮತ, ಒ.ಆರ್.ರಂಗೇಗೌಡ 1268, ಶರತ್.ಕೆ.ಪಿ.ಕೆಂಬಾಳು 1254, ಸಿ.ಜೆ.ಮಂಜುನಾಥ್-1121, ಸಿ.ಟಿ.ಕುಮಾರಸ್ವಾಮಿ-1034, ಜಲೇಂದ್ರಕುಮಾರ್-1022. ಜೆ.ಕೆ.ರಾಘವೇಂದ್ರ-976, ಎಸ್.ಆದರ್ಶ-940, ಕೆ.ಆರ್.ಶಿವಕುಮಾರ್-853, ಡಾ.ಸಿ.ಎಸ್.ಶೇಷಶಯನ-827, ಎಂ.ಎನ್.ಸಂತೋಷ್-820, ಡಾ.ಎಸ್.ಪ್ರಮೋದ್-809, ಆನಂದ್‌ಕುಮಾರ್-778 ಮತ ಪಡೆದು ಜಯಶೀಲರಾದರು.
ಮಧ್ಯಾಹ್ನ 3 ಗಂಟೆಗೆ ಮತದಾನ ಪ್ರಕ್ರಿಯೆ ಮುಗಿದ ನಂತರ, ಸಂಜೆ 4 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಯಿತು. ಸಂಸ್ಥೆಯ 5 ಕೊಠಡಿಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆಯಿತು. ಪ್ರತಿ ಟೇಬಲ್‌ಗೆ ಸ್ಪರ್ಧಿಯ ಪರವಾಗಿ ಒಬ್ಬ ಏಜೆಂಟ್‌ಗೆ ಮತ ಎಣಿಕೆ ಕಾರ್ಯಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಏಜೆಂಟ್ ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ಕಲ್ಪಿಸದ ಕಾರಣ ಮತ ಎಣಿಕೆ ಕಾರ್ಯವು ಅತ್ಯಂತ ಸರಾಗವಾಗಿ, ಶಾಂತಿಯುತವಾಗಿ ನಡೆಯಿತು.
ಸ್ಪರ್ಧೆಯಲ್ಲಿದ್ದ 36 ಸ್ಪರ್ಧಿಗಳ ಪೈಕಿ ಸಾಕಷ್ಟು ಅಭ್ಯರ್ಥಿಗಳು ಹಾಲಿ ನಿರ್ದೇಶಕರು, ಮಾಜಿ ನಿರ್ದೇಶಕರಾಗಿದ್ದರು. ಈ ಪೈಕಿ ಮತದಾರ ಮೂವರು ಮಾಜಿ ನಿರ್ದೇಶಕರಿಗಷ್ಟೆ ಮಣೆ ಹಾಕಿ ಇನ್ನುಳಿದಂತೆ 10 ಹೊಸ ಮುಖಗಳಿಗೆ ಮತದಾರರು ಅವಕಾಶ ಮಾಡಿಕೊಟ್ಟಿದ್ದಾರೆ.
ವಿದ್ಯಾಸಂಸ್ಥೆಯ ಆರಂಭದ ದಿನಗಳಿಂದಲೂ ಶಿಕ್ಷಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿ ದಶಕಗಳೇ ಕಳೆದಿರುವ ಹಲವು ಶಿಕ್ಷಕರು ಮತದಾನದಲ್ಲಿ ಪಾಲ್ಗೊಂಡರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಡಾ.ನಲ್ಲೂರುಪ್ರಸಾದ್ ಇದೇ ಶಾಲೆಯ ವಿದ್ಯಾರ್ಥಿಯಾಗಿದ್ದು, ಅವರೂ ಮತದಾನದಲ್ಲಿ ಪಾಲ್ಗೊಂಡಿದ್ದರು. ನಿವೃತ್ತ ಶಿಕ್ಷಕರಾದ ಎನ್.ಎಸ್.ಕೃಷ್ಣ, ಎಂ.ವಿ.ವಸಂತ್, ಕೆ.ಜಿ.ನಾಗರಾಜ್, ಜಿ.ಕೆ.ವಿಶ್ವನಾಥ್, ಎಂ.ಕೆ.ಶಿವರಾಂ ಸೇರಿದಂತೆ ಹಲವರು ಮತದಾನ ಮಾಡಿ ಸೇವಾ ಅವಧಿಯ ನೆನಪು ಮಾಡಿಕೊಂಡದರು.
ಗೆದ್ದ ನಿರ್ದೇಶಕರ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿಹಂಚಿ ಸಂಭ್ರಮಿಸಿದರು. ತಮಟೆ, ಡೊಳ್ಳು ಕುಣಿತಕ್ಕೆ ಹೆಜ್ಚೆ ಹಾಕಿ ಗೆದ್ದ ನಿರ್ದೇಶಕರಿಗೆ ಶುಭಾಶಯ ಕೋರಿದರು.