ಅಭ್ಯರ್ಥಿಗಳ ಆಯ್ಕೆ ವಿಚಾರ: ಮುಂದಿನ ವಾರ ಸಭೆ

15 vikram 10
Published on

ಧಾರವಾಡ: ಲೋಕಸಭಾ ಚುನಾವಣೆಗೆ ಧಾರವಾಡ ಕ್ಷೇತ್ರದ ಆಕಾಂಕ್ಷಿಗಳ ಸಭೆಯನ್ನು ಮುಂದಿನ ವಾರದಲ್ಲಿ ಹುಬ್ಬಳ್ಳಿ ಅಥವಾ ಧಾರವಾಡದಲ್ಲಿ ನಡೆಸುವುದಾಗಿ ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಆಕಾಂಕ್ಷಿಗಳು ಎಷ್ಟು ಜನರಿದ್ದಾರೆ ಎಂಬುದು ಗೊತ್ತಿಲ್ಲ. ಹೀಗಾಗಿ ಸಭೆ ನಡೆಸಬೇಕಿದೆ. ಎಲ್ಲ ಮುಖಂಡರು, ಆಕಾಂಕ್ಷಿಗಳನ್ನು ಸಹ ಭೇಟಿ ಮಾಡಲಾಗುವುದು. ಈವರೆಗೂ ಯಾವ ಆಕಾಂಕ್ಷಿಯೂ ಮನವಿ ಸಲ್ಲಿಸಿಲ್ಲ. ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯ ಹಣ ಪಾವತಿ ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು, ಈಗ ಎಲ್ಲವೂ ಸರಳವಾಗಿದೆ. ಈ ಯೋಜನೆ ರಾಜ್ಯದ 1.9 ಕೋಟಿ ಜನರಿಗೆ ತಲುಪಿದೆ. ಇನ್ನು ಐದಾರು ಲಕ್ಷ ಜನರ ಅರ್ಜಿಗಳು ವಿಲೇವಾರಿ ಆಗಬೇಕಿದೆ. 15 ಲಕ್ಷ ಜನರು ಆಧಾರ್ ಲಿಂಕ್ ಇಲ್ಲದ ಅಕೌಂಟ್ ನೀಡಿದ್ದರು. ಕೆಲವರದ್ದು ಅಕೌಂಟ್ ಚಾಲ್ತಿ ಇರಲಿಲ್ಲ. ಹೀಗಾಗಿ ವಿಳಂಬವಾಗಿದೆಯೇ ಹೊರತು ಅನುದಾನದ ಕೊರತೆ ಏನಿಲ್ಲ. ಮುಖ್ಯಮಂತ್ರಿಗಳು ಅನುದಾನ ಮೀಸಲಿಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳನ್ನು ಎಂದಿಗೂ ನಿಲ್ಲಿಸಿಲ್ಲ. ಆದರೆ ಹಿಂದಿನ ಸರ್ಕಾರ ಬೇಕಾಬಿಟ್ಟಿ ಟೆಂಡರ್ ಕರೆದಿತ್ತು. ಆದರೆ ಅವರೇ ಈಗ ಅಭಿವೃದ್ಧಿ ಬಗ್ಗೆ ಕೇಳುತ್ತಿದ್ದಾರೆ. ಅವರು ಮಾಡಿಟ್ಟ ರಾಡಿಯನ್ನು ಈಗ ನಾವು ತೊಳೆಯುವಂತಾಗಿದೆ. ಇದು ಜನರಿಗೆ ಗೊತ್ತಾಗಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net