

ಸಿಂದಗಿ: ಆಶ್ರಯ ವಸತಿ ಯೋಜನೆಯಡಿ ಜಾತಿ, ವರ್ಗವಾರು ಲಾನುಭವಿಗಳ ಆಯ್ಕೆಗೆ ಪಾರದರ್ಶಕತೆ ಒದಗಿಸಿ, ಅರ್ಹರನ್ನು ಗುರುತಿಸಿ, ವರ್ಗವಾರು ಮೀಸಲು ಪರಿಶೀಲಿಸಿ, ಯಾರಿಗೂ ಅನ್ಯಾಯವಾಗದಂತೆ ಆಯ್ಕೆ ಮಾಡಲು, ಲಾಟರಿ ಮೊರೆ ಹೋಗುವುದಾಗಿ ಆಶ್ರಯ ಸಮಿತಿ ಅಧ್ಯಕ್ಷ, ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಪುರಸಭೆ ಸಭಾ ಭವನದಲ್ಲಿ ಬುಧವಾರ ನಡೆದ ಆಶ್ರಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ವಿವಿಧ ಆಶ್ರಯ ಯೋಜನೆಗಳ 750 ಮನೆಗಳಲ್ಲಿ 389 ಅರ್ಹರನ್ನು ಗುರುತಿಸಿ, ಅದರಲ್ಲಿ 175 ಅನರ್ಹ ಲಾನುಭವಿಗಳಿದ್ದು, ಆ ಮನೆಗಳ ಲಾನುಭವಿಗಳ ಹೊಸ ಆಯ್ಕೆಗೆ ಜಾಹೀರಾತು ನೀಡಿ, ನೇರವಾಗಿ ಮುಖ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಮಾಹಿತಿ ಒದಗಿಸಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಆಶ್ರಯ ವಸತಿ, ಯೋಜನೆಗಳ ಗುರುತಿಸಲಾದ ಅನರ್ಹರನ್ನು ಹೊಸದಾಗಿ ಲಾಟರಿ ಮೂಲಕ ಪಾರದರ್ಶಕ ಆಯ್ಕೆಗೆ ಒತ್ತು ನೀಡಲಾಗುವುದು ಎಂದರು.
ಪುರಸಭೆಯ ಎಲ್ಲ ಆಶ್ರಯ ಮನೆಗಳ ಲಾನುಭವಿಗಳನ್ನು ಆಯಾ ಜಾತಿವಾರು ಪಟ್ಟಿ ಸಿದ್ಧಪಡಿಸಿ, ಮನೆಗಳ ಸಂಖ್ಯೆಗನುಗುಣವಾಗಿ, ನಗರ ನಿವಾಸಿಗಳನ್ನೇ ಎಲ್ಲ ಆಶ್ರಯ ಮನೆಗಳ ಅರ್ಜಿದಾರರನ್ನಾಗಿ ಪರಿಗಣಿಸಿ, ಲಾಟರಿ ಮೂಲಕ ಆಯ್ಕೆ ಮಾಡುವ ಮೂಲಕ ರಾಜ್ಯ ಸರ್ಕಾರದ ಆಶಯ ಈಡೇರಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ, ಅಂತರಗಂಗಿ ರಸ್ತೆಯಲ್ಲಿನ 411 ವಸತಿ ಮನೆಗಳಲ್ಲಿ ಈಗಾಗಲೇ 186 ಲಾನುಭವಿಗಳ ಆಯ್ಕೆ ಮಾಡಲಾಗಿದೆ. ಅವುಗಳಲ್ಲಿ 139 ಮನೆಗಳನ್ನು ಹಂಚಲಾಗಿದೆ. ಉಳಿದ 225 ಮನೆಗಳಿಗೆ ಲಾನುಭವಿಗಳ ಆಯ್ಕೆ ಮಾಡಬೇಕಿದೆ. ಈ ಮನೆಗಳ ಬೇಡಿಕೆಗಾಗಿ ಈ ವರೆಗೆ 1,100 ಅರ್ಜಿಗಳು ಸಲ್ಲಿಕೆಯಾಗಿವೆ. ಆಯ್ಕೆಯಾದ ಕೆಲವು ಲಾನುಭವಿಗಳು ಪುರಸಭೆಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಕೋರಲಾಗಿತ್ತು. ಆದರೆ, ಲಾನುಭವಿಗಳು ದಾಖಲೆ ಹಾಜರು ಪಡಿಸಿಲ್ಲ ಎಂದರು.
ಶಾಸಕ ಮನಗೂಳಿ ಅವರು, ಅವರಿಗೆ ಎಷ್ಟು ನೋಟಿಸ್ ಕೊಟ್ಟಿದ್ದೀರಿ ? ಅವರಿಗೆ ಮೂರು ನೋಟಿಸ್ ನೀಡಿ. ಅಂತಿಮ ನೋಟಿಸಿಗೂ ದಾಖಲೆ ನೀಡದಿದ್ದರೆ, ವಾರದ ಕೊನೇ ಅವಧಿ ಘೋಷಿಸಿ, ಆಗಲೂ ಸಲ್ಲಿಸದೇ ಹೋದರೆ, ಅವರನ್ನು ಲಾನುಭವಿಗಳ ಪಟ್ಟಿಯಿಂದ ಕೈ ಬಿಡೋಣ ಎಂದರು.
ಸ್ಲಂ ಬೋರ್ಡ್‌ನ 8 ಎಕರೆ ಜಾಗೆಯಲ್ಲಿ 300 ಮನೆಗಳ ಬದಲಾಗಿ 250 ಮನೆಗಳ ನಕ್ಷೆ ಮಾಡಲಾಗಿತ್ತು. ಅದನ್ನು ನಾನು ಖುದ್ದಾಗಿ ಅಲ್ಲಿನ ವಸತಿ ವಿಸ್ತೀರ್ಣ ಬದಲಾಯಿಸಿರುವೆ. ಸದ್ಯ 105 ಮನೆಗಳನ್ನು ಕಟ್ಟಲಾಗಿದ್ದು, ಅವರಿಗೆ ಹಕ್ಕು ಪತ್ರ ನೀಡಬೇಕಿದೆ. ಆದರೆ, ಕುಡಿಯುವ ನೀರು, ಒಳಚರಂಡಿ, ರಸ್ತೆ ಕೆಲಸವಾಗಬೇಕಿದೆ. ಸಂಬಂಧಿಸಿದ ಇಲಾಖೆ ಸಚಿವರಿಗೆ ಹೆಚ್ಚುವರಿ ಮನೆಗಳಿಗಾಗಿ ಬೇಡಿಕೆ ಸಲ್ಲಿಸಿರುವೆ. ಸಿಎಂ ಅವರು ವರ್ಚ್ಯುವೆಲ್ ಆಗಿ ವಸತಿ ಮನೆಗಳನ್ನು ಉದ್ಘಾಟಿಸುವುದಾಗಿ ತಿಳಿಸಿದ್ದಾರೆ. ಶೀಗ್ರ ಮನೆಗಳ ಹಕ್ಕು ಪತ್ರ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.
ಆಶ್ರಯ ಸಮಿತಿ ಸದಸ್ಯ ಭೀಮು ರೋಡಗಿ, ನಗರದ ಬೈಪಾಸ್ ಬಳಿಯ 473, 474ರ ಸ.ನಂ. ಕುರಿತು ಚರ್ಚಿಸಿ ಈ ಜಾಗೆಯಲ್ಲಿ ಶೇ.80ರಷ್ಟು ನೆರೆಹೊರೆ ಗ್ರಾಮದವರೇ ವಾಸವಾಗಿದ್ದಾರೆ. 1,625 ಮನೆಗಳಿದ್ದು, ಅದರಲ್ಲಿ 517 ಜನರು ಮುಂಗಡ ಹಣ ನೀಡಿದ್ದು, 1,058 ಜನರು ಯಾವುದೇ ಮುಂಗಡ ಹಣ ಭರಿಸಿಲ್ಲ. ಅಲ್ಲದೇ ಈ ಜಾಗೆಯಲ್ಲಿ 30 ಫೂಟ್ ಆಳದಲ್ಲಿ ತಗ್ಗು ತೋಡಿ, ಅಲ್ಲಿಂದ ಗರಸು ಲೂಟಿ ಮಾಡಿದ್ದಾರೆ. ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಅರ್ಜಿ ನೀಡಿ, ಮನವಿ ಮಾಡಿಕೊಂಡರೂ ಕ್ಯಾರೆ ಎಂದಿಲ್ಲ ಎಂದು ದೂರಿದರು. ಇದಕ್ಕೆ ಈ ಜಾಗೆಯ ಹದ್ದುಬಸ್ತ್ ಮಾಡಿ, ಟೌನ್ ಪ್ಲಾನಿಂಗ್ ಅನುಮತಿ ಪಡೆದು ರಸ್ತೆ ಮಾಡಿ, ಕಲ್ಲುಹಾಕಿ ಎಂದು ಸೂಚಿಸಿ ಮಂಜೂರಾದ 10 ಲಕ್ಷ ರೂ. ಖರ್ಚು ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.
ಅಲ್ಲದೆ, ಪೌರಕಾರ್ಮಿಕರ ಬಡಾವಣೆಯಲ್ಲಿ 47 ನಿವೇಶನಗಳನ್ನು ನೀಡಲಾಗಿದೆ. ಆ ಜಾಗೆಯನ್ನು ಸ್ವಚ್ಛಗೊಳಿಸಿ, ಪಿಟಿ ಸೀಟ್ ಮಾಡಿಸಿ, 69ರ ಅಳತೆಯಂತೆ ನಿವೇಶನಗಳ ಲೇಔಟ್ ಸಿದ್ಧಪಡಿಸಲು ಪುರಸಭೆ ಅಭಿಯಂತರರಿಗೆ ಸೂಚಿಸಿದರು.
ಸಭೆಯಲ್ಲಿ ಆಶ್ರಯ ಸಮಿತಿ ಸದಸ್ಯೆ ಶೈಲಶ್ರೀ ಪೂಜಾರಿ, ಸದಸ್ಯ ಮಲ್ಲು ಸದುಗೋಳ, ರಾಜು ಖೇಡ, ಮುಖ್ಯಾಧಿಕಾರಿ ಎಸ್. ರಾಜಶೇಖರ ಹಾಗೂ ಸಿಬ್ಬಂದಿ ಇದ್ದರು.