ಯಕ್ಷಗಾನದ ಅನನ್ಯ ಸಾಧಕ ಸೀತಾರಾಮ ತೋಳ್ಪಡಿತ್ತಾಯ : ಕುರಿಯ ವಿಠಲ ಶಾಸ್ತ್ರೀ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆ

seetharama
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರು ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಆಶ್ರಯದಲ್ಲಿ ಸುಮಾರು 50 ವರ್ಷ ಉದ್ಯೋಗ ನಡೆಸಿ ಯಕ್ಷಗಾನ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಧರ್ಮಸ್ಥಳದ ಬಿ.ಸೀತಾರಾಮ ತೋಳ್ಪಡಿತ್ತಾಯ ಅವರು ಕುರಿಯ ವಿಠಲ ಶಾಸ್ತ್ರೀ ಸಂಸ್ಮರಣಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಾಂತಿವನದ ಕಾರ್ಯದರ್ಶಿಯಾಗಿ 25 ವರ್ಷಗಳಿಂದ ಸೇವೆ ಸಲ್ಲಿಸಿ ಹೆಗ್ಗಡೆ ಕುಟುಂಬಸ್ಥರ ನಿಕಟವರ್ತಿಯಾಗಿ, ಯಕ್ಷಗಾನ ಕ್ಷೇತ್ರದ ಚೆಂಡೆ-ಮದ್ದಳೆ ವಾದನ ಕಲಾವಿದರಾಗಿ ಬಹುಮುಖ ಸಾಧನೆಗೈದಿದ್ದಾರೆ. ಜು.1ರಿಂದ 7ರವರೆಗೆ ಪುತ್ತೂರಿನ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯಲಿರುವ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರಿಗೆ ಎಡನೀರು ಶ್ರೀಗಳು ಪ್ರಶಸ್ತಿ ಪ್ರದಾನಗೈಯ್ಯಲಿದ್ದಾರೆ.

ಭಾಗವತರಾಗಿದ್ದ ಬಿ.ರಾಘವೇಂದ್ರ ತೋಳ್ಪಡಿತ್ತಾಯ ಪುತ್ರರಾಗಿ 1953 ಮಾರ್ಚ್ 26ರಂದು ಧರ್ಮಸ್ಥಳದಲ್ಲಿ ಜನಿಸಿದ ಸೀತಾರಾಮ ತೋಳ್ಪಡಿತ್ತಾಯರು ಬಾಲ್ಯದಿಂದಲೇ ಯಕ್ಷಗಾನ ವೇಷಗಾರಿಕೆ ಹಾಗೂ ಹಿಮ್ಮೇಳದಲ್ಲಿ ಅಭಿರುಚಿ ಬೆಳೆಸಿಕೊಂಡಿದ್ದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ವಿವಿ ಮಟ್ಟದಲ್ಲಿ ಯಕ್ಷಗಾನ ಹಿಮ್ಮೇಳದಲ್ಲಿ ಪ್ರಥಮ ಪ್ರಶಸ್ತಿ ಪಡೆದಿದ್ದರು. 1972ರಲ್ಲಿ ಶ್ರೀ ಕ್ಷೇತ್ರದಲ್ಲಿ ಯಕ್ಷಗಾನ ಕಲಿಕಾ ಕೇಂದ್ರ ಪ್ರಾರಂಭವಾದಾಗ ಕೇಂದ್ರದ ವಿದ್ಯಾರ್ಥಿಯಾಗಿ ಕುರಿಯ ವಿಠಲ ಶಾಸ್ತ್ರೀ, ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನದ ನಾಟ್ಯ ಹಾಗೂ ಚೆಂಡೆ, ಮದ್ದಳೆ ವಾದನಗಳಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ಕಳೆದ 50 ವರ್ಷಗಳಿಂದ ಬಯಲಾಟ ಹಾಗೂ ತಾಳಮದ್ದಳೆಗಳಲ್ಲಿ ಹಿಮ್ಮೇಳ ಕಲಾವಿದರಾಗಿ ಅಗ್ರಮಾನ್ಯ ಕಲಾವಿದರಾದ ನೆಡ್ಲೆ ನರಸಿಂಹ ಭಟ್ಟ, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್, ಮಾಂಬಾಡಿ ಸುಬ್ರಹ್ಮಣ್ಯ ಭಟ್, ಪದ್ಯಾಣ ಶಂಕರನಾರಾಯಣ ಭಟ್, ಗೋಪಾಲಕೃಷ್ಣ ಕುರುಪ್ ಮೊದಲಾದ ಹಿರಿಯ ಮದ್ದಳೆ ವಾದಕರ ಒಡನಾಟದಲ್ಲಿ ವಿಶೇಷ ಪರಿಣತಿ ಪಡೆದರು. ಭಾಗವತರಾದ ಕಡತೋಕ ಮಂಜುನಾಥ ಭಾಗವತ, ದಾಮೋದರ ಮಂಡೆಚ್ಚ, ಬಲಿಪ ನಾರಾಯಣ ಭಾಗವತ, ಪದ್ಯಾಣ ಗಣಪತಿ ಭಟ್, ಪುತ್ತಿಗೆ ರಘುರಾಮ ಹೊಳ್ಳ, ದಿನೇಶ್ ಅಮ್ಮಣ್ಣಾಯ ಮೊದಲಾದ ಹಿರಿಯ ಭಾಗವತರ ತಿರುಗಾಟದ ಜತೆಯಲ್ಲಿ ಹಿಮ್ಮೇಳದಲ್ಲಿ ಸಾಥ್ ನೀಡಿ ಮೆಚ್ಚುಗೆ ಪಡೆದರು.

ಸಿದ್ಧಿ ಸಾಧನೆ ಪ್ರಶಸ್ತಿಗಳು

ಸೀತಾರಾಮ ತೋಳ್ಪಡಿತ್ತಾಯರು ಅನೇಕ ಯಕ್ಷಗಾನ, ಆಟ , ಕೂಟ, ಗಾನ ವೈಭವ, ರೂಪಕಗಳನ್ನು ನಿರ್ದೇಶಿಸಿದವರು. 100ಕ್ಕೂ ಮಿಕ್ಕಿ ಧ್ವನಿಸುರುಳಿಗಳಲ್ಲಿ ಸಿ.ಡಿ,.ಡಿ.ವಿ.ಡಿ ಗಳಲ್ಲಿ, ಚೆನ್ನೈ, ಹೈದರಾಬಾದ್, ಭೋಪಾಲ್, ದಿಲ್ಲಿ, ಮುಂಬಯಿ ಮೊದಲಾದ ಪ್ರಮುಖ ನಗರಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ದೆಹಲಿಯಲ್ಲಿ ಅಂದಿನ ರಾಷ್ಟ್ರಪತಿ ಶಂಕರ ದಯಾಳ್ ಶರ್ಮ ಅವರ ಉಪಸ್ಥಿತಿಯಲ್ಲಿ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.

ದೂರದರ್ಶನದಲ್ಲಿ ಅನೇಕ ಯಕ್ಷಗಾನ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿ, ಆಕಾಶವಾಣಿಯಲ್ಲಿ ಎ ಶ್ರೇಣಿಯ ಕಲಾವಿದರಾಗಿ ಗೌರವಿಸಲ್ಪಟ್ಟವರು. 2016-17ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರು. ಶಾಂತಿವನದ ಕಾರ್ಯದರ್ಶಿಯಾಗಿ ನಡೆಸಿದ ಉತ್ತಮ ಸೇವಾ ಕಾರ್ಯ ಹಾಗೂ ರಾಷ್ಟ್ರೀಯ ಯೋಗ ಸಾಧನೆಯ ದಾಖಲೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net