

ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ತೂಬಗೆರೆ
ಕನ್ನಡ ಬರೆಯಲು, ಮಾತನಾಡಲು ಬರಲ್ಲ ಎಂಬ ಕಾರಣಕ್ಕೆ ಸ್ತೀಶಕ್ತಿ ಸಂಘಕ್ಕೆ ಸೇರುವ ಅವಕಾಶದಿಂದ ವಂಚಿತೆಯಾದ ಮಹಿಳೆಯೊಬ್ಬರು ಇದೇ ಕರುನಾಡಿನ ಪ್ರತಿನಿಧಿಯಾಗಿ ನವದೆಹಲಿಯ ಗಣರಾಜ್ಯೋತ್ಸವ ಪೆರೇಡ್ ವೀಕ್ಷಣೆ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಿಗಳೊಡನೆ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ಪಡೆಯುವ ಮೂಲಕ ಗ್ರಾಮಾಂತರ ಜಿಲ್ಲೆಯ ಹೆಮ್ಮೆಯ ಕನ್ನಡತಿಯಾಗಿ ಗಮನ ಸೆಳೆದಿದ್ದಾರೆ.
ಇಡೀ ರಾಜ್ಯದಿಂದ ಸ್ವಸಹಾಯ ಗುಂಪುಗಳ 12 ಸದಸ್ಯರು ನಿಯೋಜನೆಗೊಂಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಶಿರಾವರ ಗ್ರಾಮದ ಕೃಷಿ ಸಖಿ ಹಾಗೂ ಸ್ವಸಹಾಯ ಗುಂಪಿನ ಸದಸ್ಯೆ ಪದ್ಮಾವತಿ ನಿಯೋಜನೆಗೊಂಡಿದ್ದಾರೆ. ಸಣ್ಣ ಗ್ರಾಮವೊಂದರ ಮಹಿಳೆಯ ಸಾಧನೆ ಗುರುತಿಸಿದ ಗ್ರಾಮಾಂತರ ಜಿಪಂ ಸಿಇಒ ಡಾ.ಕೆ.ಎನ್.ಅನುರಾಧಾ ಇಂಥ ಅವಕಾಶಕ್ಕೆ ಕಾರಣವಾಗಿದ್ದಾರೆ.
ರಾಜ್ಯದ 12 ಮಂದಿ ಆಯ್ಕೆ: ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ರೈತಾಪಿ ಜನರ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಪದ್ಮಾವತಿ ಅವರು ತೂಬಗೆರೆ ಹೋಬಳಿಯ ಪಂಚಾಯಿತಿ ವ್ಯಾಪ್ತಿಯಲ್ಲಿನ ರೈತರಿಗೆ ಕೃಷಿ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದು, ರೈತರಿಗೆ ಇಲಾಖೆಯ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವುದು, ಇಲಾಖೆ ಸಂಬಂಧಪಟ್ಟ ಅರ್ಜಿಗಳನ್ನು ಹಾಕಿಸುವುದು ರೈತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುವುದು ಹೀಗೆ ಕೃಷಿ ಸಖಿಯಾಗಿ ಸ್ವಸಹಾಯ ಗುಂಪಿನ ಸದಸ್ಯೆಯಾಗಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇವರ ಕಾರ್ಯವೈಖರಿಗೆ ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ರಾಜ್ಯದ 12 ಕೃಷಿ ಸಖಿಯರ ಪೈಕಿ ಜಿಲ್ಲೆಯಿಂದ ಇವರನ್ನು ಆಯ್ಕೆ ಮಾಡಲಾಗಿದೆ.
ಕುಟುಂಬದವರ ಸಹಕಾರ: ಆಂಧ್ರ ಮೂಲದ ಪದ್ಮಾವತಿ ಪಿಯುಸಿ ವ್ಯಾಸಂಗ ಮುಗಿಸಿದ್ದು ಮದುವೆಯಾಗಿ ತೂಬಗೆರೆಯ ಶಿರಾವರ ಗ್ರಾಮದ ಪತಿ ಮನೆ ಹೊಸ್ತಿಲು ತುಳಿದಿದ್ದರು. ಕೃಷಿ ಸಖಿಯಾಗಿ ಕೆಲಸ ನಿರ್ವಹಿಸಲು ಮೊದಲಿಗೆ ಕುಟುಂಬದವ ವಿರೋಧವಿತ್ತಾದರೂ ಕ್ರಮೇಣ ಇವರಿಗೆ ಪತಿ ಹಾಗೂ ಕುಟುಂಬ ಒತ್ತಾಸೆಯಾಯಿತು. ಮೊದಲಿಗೆ ಸ್ತೀಶಕ್ತಿ ಸಂಘಕ್ಕೆ ಸೇರಲು ಇಚ್ಛಿಸಿದರೂ ಕನ್ನಡ ಬರೆಯಲು ಹಾಗೂ ಮಾತನಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಅವಕಾಶ ಕೈತಪ್ಪಿತ್ತು ಇದನ್ನೇ ಸವಾಲಾಗಿ ಸ್ವೀಕರಿಸಿದ ಇವರು ಕನ್ನಡ ಬರೆಯಲು ಹಾಗೂ ಮಾತನಾಡಲು ಕಲಿತರು, ತೂಬಗೆರೆ ಹಾಡೋನಹಳ್ಳಿಯ ಕೃಷಿವಿಜ್ಞಾನ ಕೇಂದ್ರದಲ್ಲಿ ತರಬೇತಿ ಪಡೆದು ಕೃಷಿ ಸಖಿಯಾಗಿ ಸೇವೆ ಆರಂಭಿಸಿದರು.
ಇಂಥ ಅವಕಾಶ ಸಿಕ್ಕರುವುದು ನಿಜಕ್ಕೂ ತುಂಬಾ ಸಂತಸವಾಗುತ್ತಿದೆ, ಇದಕ್ಕೆ ಸಹಕಾರ ನೀಡಿದ ನನ್ನ ಕುಟುಂಬ ಹಾಗೂ ಅಧಿಕಾರಿ ವರ್ಗ ಹಾಗೂ ಜನರ ಆಶೀರ್ವಾದಕ್ಕೆ ಚಿರಋಣಿಯಾಗಿದ್ದೇನೆ. ರೈತಾಪಿ ಜನರಿಗೆ ಕೃಷಿ ಇಲಾಖೆಯ ಯೋಜನೆ ಬಗ್ಗೆ ತಿಳಿಸುವುದು ಸವಲತ್ತುಗಳನ್ನು ದೊರಕಿಸಿಕೊಡುವುದು ಮತ್ತಿತರ ಸೇವೆಯಲ್ಲಿ ನಿರತಳಾಗಿದ್ದೇನೆ. ಯಾವುದೋ ಸಣ್ಣ ಗ್ರಾಮದ ಮಹಿಳೆಯನ್ನು ಗುರುತಿಸಿ ಪ್ರೋತ್ಸಾಹಿಸಿರುವುದಕ್ಕೆ ತುಂಬಾ ಭಾವುಕಳಾಗಿದ್ದೇನೆ. ದೆಹಲಿಗೆ ತೆರಳಲು ನನ್ನ ಜತೆ ನನ್ನ ಪತಿಗೂ ಅವಕಾಶ ಮಾಡಿಕೊಟ್ಟಿದ್ದಾರೆ ಹೋಗಿ ಬರುವ ಎಲ್ಲ ಖರ್ಚು ವೆಚ್ಚ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.
ಪದ್ಮಾವತಿ, ಕೃಷಿ ಸಖಿ