

ಮೈಸೂರು: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಮೈಸೂರು ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಉಪನ್ಯಾಸಕ ಬಸಪ್ಪ ಸಿ.ಸಾಲುಂಡಿ ಆಯ್ಕೆಯಾಗಿದ್ದಾರೆ.
ವೇದಿಕೆಯ ಜಿಲ್ಲಾಧ್ಯಕ್ಷರಾಗಿದ್ದ ಡಾ.ಬಿ.ಬಸವರಾಜು ಅವರ ಅಧಿಕಾರದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಅದಮ್ಯ ರಂಗಶಾಲೆಯ ಕಚೇರಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ರಾಜ್ಯಾಧಕ್ಷ ಕೊಟ್ರೇಶ್ ಎಸ್.ಉಪ್ಪಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಸಪ್ಪ ಸಿ.ಸಾಲುಂಡಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿ ನೇಮಕಾತಿ ಪತ್ರ ವಿತರಿಸಲಾಯಿತು.
ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಬಸಪ್ಪ ಸಿ.ಸಾಲುಂಡಿ ಅವರು ‘ಸನ್ವಿತಿ ಪ್ರಕಾಶನ’ ಪ್ರಕಾಶಕರಾಗಿ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಲೇಖಕರಾಗಿಯೂ ಗುರುತಿಸಿಕೊಂಡಿದ್ದು, ಹೊನ್ನೇರು, ಕೆಟ್ಟ ಬಾಳಿಗೆ ಕೊಟ್ಟ ಬೆಳಕು, ಕನ್ನಡದ ಕನ್ನಡಿ, ಕಾರಂತಜ್ಜ, ಸೇವಾ ಮಾರ್ಕೆಟಿಂಗ್ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ‘ಜನಸಾಮಾನ್ಯರ ಸಾಹಿತ್ಯ ಮಾಲೆ’ಯ ಸಂಪಾದಕ ಮಂಡಳಿಯ ಸದಸ್ಯರಾಗಿ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೈಸೂರು ವಿಭಾಗದ ಉಸ್ತುವಾರಿಯಾದ ರಾಜ್ಯ ಉಪಾಧ್ಯಕ್ಷ ಟಿ.ಸತೀಶ್ ಜವರೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ರಂಗಕರ್ಮಿ ಚಂದ್ರು ಮಂಡ್ಯ ಇದ್ದರು.