ನಾಡಪ್ರಭು ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ

Published on

ಮೈಸೂರು: ಸ್ಪಂದನ ಸಾಂಸ್ಕೃತಿಕ ಪರಿಷತ್ತು ಹಾಗೂ ಅದಮ್ಯ ರಂಗಶಾಲೆಯಿಂದ ವಿವಿಧ ಕ್ಷೇತ್ರದ ಆರು ಜನರು ‘ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ರಂಗಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಚಂದ್ರು ಮಂಡ್ಯ ಹಾಗೂ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ತಿಳಿಸಿದ್ದಾರೆ.
ಸಾಹಿತಿ ಮತ್ತು ಅಂಕಣಕಾರ ಮಿರ್ಲೆ ಚಂದ್ರಶೇಖರ್ (ಸಾಹಿತ್ಯ ಕ್ಷೇತ್ರ), ವಿಜಯವಾಣಿ ದಿನಪತ್ರಿಕೆ ಮುಖ್ಯ ವರದಿಗಾರ ಆರ್. ಕೃಷ್ಣ (ಪತ್ರಿಕೋದ್ಯಮ ಕ್ಷೇತ್ರ), ಕನ್ನಿಕಾ ಕಾವೇರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಸಿ. ಚೋಂದಮ್ಮ (ಶಿಕ್ಷಣ ಕ್ಷೇತ್ರ), ಜಿಲ್ಲಾ ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಆರ್. ನರಸಿಂಹಮೂರ್ತಿ (ಸಮಾಜ ಸೇವಾ ಕ್ಷೇತ್ರ), ವಿಸ್ಮಯ ಪ್ರಕಾಶನದ ಮುಖ್ಯಸ್ಥ ಹಾಲತಿ ಲೋಕೇಶ್ (ಪುಸ್ತಕ ಪ್ರಕಾಶನ), ಮೈಸೂರು ತಾಲೂಕು ಶಿಕ್ಷಕರ ಸಂಘದ ನಿರ್ದೇಶಕ ಜಿ.ಮಹೇಶ್ (ಸಂಘಟನಾ ಕ್ಷೇತ್ರ) ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ಅ.6 ರಂದು ಸಂಜೆ 5.30 ಗಂಟೆಗೆ ಆಯೋಜಿಸಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಕಾರ್ಯಕ್ರಮ ಉದ್ಘಾಟಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸುವರು. ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಭವನದ ವಿಶ್ರಾಂತ ನಿರ್ದೇಶಕ ಡಾ.ಎಸ್. ಶಿವರಾಜಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ. ಸತೀಶ್ ಜವರೇಗೌಡ ಅಭಿನಂದನಾ ಮತ್ತು ಆಶಯ ನುಡಿಗಳನ್ನಾಡುವರು ಎಂದು ಹೇಳಿದ್ದಾರೆ.
ಖ್ಯಾತ ಕತೆಗಾರ ವಸುಧೇಂದ್ರ ಅವರ ಸಣ್ಣಕತೆಯ ಆಧಾರಿತ ‘ನಮ್ಮಮ್ಮ ಅಂದ್ರೆ ನಂಗಿಷ್ಟ’ ನಾಟಕ ಪ್ರದರ್ಶನ ನಡೆಯಲಿದೆ. ವಿನೋದ್ ಸಿ. ಮೈಸೂರು ಅವರು ಈ ಕತೆಯನ್ನು ರಂಗರೂಪಕ್ಕೆ ಅಳವಡಿಸಿ ನಿರ್ದೇಶನ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net