

ಕೊಳ್ಳೇಗಾಲ: ತಾಲೂಕಿನ ಮುಳ್ಳೂರು ಶ್ರೀ ಕಾವೇರಿ ಮೀನುಗಾರರ ಸಹಕಾರ ಸಂಘದ 5 ವರ್ಷದ ಆಡಳಿತ ಮಂಡಳಿಗೆ 10 ನಿರ್ದೇಶಕರು ಬುಧವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದಲ್ಲಿ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಒಳಗೊಂಡತೆ 13 ನಿರ್ದೇಶಕರ ಸ್ಥಾನವಿದ್ದು. ಈ ಪೈಕಿ 12 ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗದಿಪಡಿಸಲಾಗಿತ್ತು. ಸಾಮಾನ್ಯ 6, ಪರಿಶಿಷ್ಟ ಜಾತಿ(ಮೀಸಲು)1, ಪರಿಶಿಷ್ಟ ಪಂಗಡ 1, ಪ್ರವರ್ಗ ಎ. ಮೀಸಲು ಸ್ಥಾನ 1, ಪ್ರವರ್ಗ ಬಿ.ಮೀಸಲು ಸ್ಥಾನಕ್ಕೆ 1, ಮಹಿಳಾ ಸ್ಥಾನ 2ರ ಸ್ಪರ್ಧೆಗೆ ಅವಕಾಶವಿತ್ತು. ಅಂತೆಯೇ ಮೇ 26ರಂದು ಸಾಮಾನ್ಯ ಸ್ಥಾನಕ್ಕೆ 8, ಮಹಿಳಾ ಮೀಸಲು ಸ್ಥಾನಕ್ಕೆ 2, ಪ್ರವರ್ಗ ಎ ಮೀಸಲು ಸ್ಥಾನ 1, ಪರಿಶಿಷ್ಟ ಪಂಗಡ 1 ಒಟ್ಟು 12 ಸ್ಪರ್ಧಿಗಳು ನಾಮ ಪತ್ರ ಸಲ್ಲಿಸಿದ್ದರು. ಸಂಘದಲ್ಲಿ ಸದಸ್ಯರು ಇಲ್ಲದ ಕಾರಣ ಉಳಿದ ಪರಿಶಿಷ್ಟ ಜಾತಿ ಮೀಸಲು 1, ಪ್ರವರ್ಗ -ಬಿ ಮೀಸಲು 1 ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸಲಿಲ್ಲ.
ಮಂಗಳವಾರ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಿತು. ಬುಧವಾರ ಮೀನುಗಾರರ ಸಹಕಾರ ಸಂಘದ ಕಚೇರಿಯಲ್ಲಿ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಎಂ.ಕೆ.ಪುಟ್ಟಸ್ವಾಮಿ ಹಾಗೂ ವಿ.ಚಂದ್ರಶೇಖರ್ ಇಬ್ಬರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದರಿಂದ ನಾಮಪತ್ರ ಸಲ್ಲಿಸಿದ್ದ 10 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮುಳ್ಳೂರು ಗ್ರಾಮದ ಸಂಘದ ಕಚೇರಿಯಲ್ಲಿ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕರು ಹಾಗೂ ರಿಟರ್ನಿಂಗ್ ಅಧಿಕಾರಿ ಎಸ್.ನಾಗೇಶ್ ಘೋಷಣೆ ಮಾಡಿದರು.
ನೂತನ ನಿರ್ದೇಶಕರಿಗೆ ಷೇರುದಾರರು ಹಾಗೂ ಸಾರ್ವಜನಿಕರು ಹಾರ ಹಾಕಿ ಅಭಿನಂದನೆ ಸಲ್ಲಿಸಿದರು. ಕಚೇರಿ ಕಾರ್ಯದರ್ಶಿ ಪರ ಮೇಶ್ ಇದ್ದರು.
ನೂತನ ನಿರ್ದೇಶಕರು: ಸಾಮಾನ್ಯ ಕ್ಷೇತ್ರದಿಂದ ಸಿದ್ದಶೆಟ್ಟಿ, ಎಂ.ಕೃಷ್ಣ, ಮಹದೇವಶೆಟ್ಟಿ, ಶಂಭುಲಿಂಗಶೆಟ್ಟಿ, ಎಂ.ಶ್ರೀಧರ್, ಎಂ.ಕೃಷ್ಣಮೂರ್ತಿ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಸಾಕಮ್ಮ, ಬಿ.ಶಿವಮ್ಮ ಮತ್ತು ಪ್ರವರ್ಗ ಎ.ಮೀಸಲು ಕ್ಷೇತ್ರದಿಂದ ಎಸ್.ಸಿದ್ದಶೆಟ್ಟಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸಿದ್ದರಾಜ ನಾಯಕ ಆಯ್ಕೆಯಾಗಿದ್ದಾರೆ. ಪದನಿಮಿತ್ತ ನಿರ್ದೇಶಕರಾಗಿ ಮೀನುಗಾರಿಕೆ ಇಲಾಖೆ ಪ್ರತಿನಿಧಿ ಆಯ್ಕೆಯಾಗಿದ್ದಾರೆ.