

ಉಡುಪಿ: ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯ ಹೆಚ್ಚಿಸಲು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೂಲಕ ಆಧುನಿಕ ಫೋಟೋ ವೋಲ್ಟಾಯಿಕ್ (ಪಿವಿ) ತಂತ್ರಜ್ಞಾನ ಬೆಸೆದು, ಪ್ರಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿರುವ ಅಮೆರಿಕದ ರಿಚರ್ಡ್ ಹ್ಯಾನ್ಸೆನ್ ಅವರಿಗೆ ಸೆಲ್ಕೋ ಸಂಸ್ಥೆಯು 2023ನೇ ಸಾಲಿನ ಪ್ರತಿಷ್ಠಿತ 'ಸೂರ್ಯಮಿತ್ರ' ವಾರ್ಷಿಕ ಪ್ರಶಸ್ತಿ ಘೋಷಿಸಿದೆ.
ಬೆಂಗಳೂರಿನ ವೈಯಾಲಿ ಕಾವಲ್ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ಮೇ 27ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಚರ್ಡ್ ಹ್ಯಾನ್ಸೆನ್ ಅವರು 1984ರಿಂದ ಮೊದಲ ಬಾರಿಗೆ ಉತ್ತರ ಅಮೆರಿಕದ ಡೊಮಿನಿಕನ್ ರಿಪಬ್ಲಿಕ್ನಲ್ಲಿ ಮೈಕ್ರೋಫೈನಾನ್ಸ್ ಪರಿಹಾರಗಳೊಂದಿಗೆ ಪಿವಿ ತಂತ್ರಜ್ಞಾನ ಪರಿಚಯಿಸಲು ಲಾಭರಹಿತ ಕಾರ್ಯಕ್ರಮ ಆಯೋಜಿಸಿದರು. ನಂತರ 1989ರಲ್ಲಿ ಇದೇ ಮಾದರಿಯನ್ನು ಹೊಂಡುರಾಸ್ನಲ್ಲಿ ಅಮೆರಿಕದ ಇಂಧನ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡು ಪುನರಾವರ್ತಿಸಿದರು. ಈ ಕೆಲಸವು ಜಾಗತಿಕವಾಗಿ ಗಮನಾರ್ಹ ಬದಲಾವಣೆಗೆ ಕಾರಣವಾಯಿತು.
ಅಮೆರಿಕದ ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲೆಪ್ಮೆಂಟ್ (ಯುಎಸ್ಎಐಡಿ), ವಿಶ್ವ ಬ್ಯಾಂಕ್ ಮತ್ತು ಇಂಟರ್- ಅಮೆರಿಕನ್ ಅಭಿವೃದ್ಧಿ ಬ್ಯಾಂಕ್ ಸೇರಿದಂತೆ ಬಾಂಗ್ಲಾದೇಶ, ಬೊಲಿವಿಯಾ, ಡೊಮಿನಿಕನ್ ರಿಪಬ್ಲಿಕ್, ಇಥಿಯೋಪಿಯಾ, ಹೈಟಿ, ಭಾರತ, ನೇಪಾಳ, ನಿಕರಾಗುವಾ, ಫಿಲಿಪೈನ್ಸ್ ದೇಶಗಳು ಮತ್ತು ಅನೇಕ ಪ್ರಮುಖ ಸಂಸ್ಥೆಗಳಿಗೆ ಸಲಹಾ ಸೇವೆ ಒದಗಿಸಿದ್ದಾರೆ.
ಎನರ್ಜಿ ಅಕ್ಸೆಸ್ ಫೌಂಡೇಷನ್ನ ಕಾರ್ಯನಿರ್ವಾಹಕ ನಿರ್ದೇಶಕ ರಿಚರ್ಡ್ ಹ್ಯಾನ್ಸೆನ್ ಜಾಗತಿಕವಾಗಿ ಸುಸ್ಥಿರ ಶಕ್ತಿಯೆಡೆಗಿನ ಪರಿವರ್ತನೆಗೆ ಸಹಾಯ ಮಾಡುತ್ತಿದ್ದಾರೆ. ಸೋ ಲುಜ್ ಇಂಕ್ ಎಂಬ ಸಾಮಾಜಿಕ ಸಂಸ್ಯೆ ಸ್ಥಾಪಿಸಿ, ಪಿವಿ ಉತ್ಪನ್ನ ಮತ್ತು ಸಂಬಂಧಿತ ಮೈಕ್ರೋಫೈನಾನ್ಸ್ ಪರಿಹಾರ ಪೂರೈಸುವ ಕೆಲಸ ಮಾಡುತ್ತಿದ್ದಾರೆ. ಮಹಾನ್ ಸಾಧಕನಿಗೆ ಸೂರ್ಯಮಿತ್ರ ಪ್ರಶಸ್ತಿ ಕೊಡಲು ಹೆಮ್ಮೆಯೆನಿಸಿದೆ. ಮೋಹನ ಭಾಸ್ಕರ ಹೆಗಡೆ. ಸಿಇಒ, ಸೆಲ್ಕೋ ಇಂಡಿಯಾ