ಸಿಎಂ, ಪಶು ಸಂಗೋಪನೆ ಸಚಿವರ ಚಿತ್ರಕ್ಕೆ ಸೆಗಣಿ

Segani
Published on

ಬ್ಯಾಡಗಿ: ಪಶು ಆಸ್ಪತ್ರೆಯ ಸಂಚಾರಿ ವಾಹನ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತೆಗೆದು ಹಾಕಿರುವುದನ್ನು ವಿರೋಧಿಸಿದ ರೈತ ಸಂಘ, ಹಸಿರು ಸೇನೆ ಹಾಗೂ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಶುಸಂಗೋಪನೆ ಸಚಿವ ಕೆ. ವೆಂಕಟೇಶ ಅವರ ಭಾವಚಿತ್ರಕ್ಕೆ ಸೋಮವಾರ ಸೆಗಣಿ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯ ಬಸವರಾಜ ಸಂಕಣ್ಣನವರ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಯನ್ನು ಮರೆಮಾಚುವ ಹುನ್ನಾರದಿಂದ ಪ್ರಧಾನಿ ಅವರನ್ನು ಅವಮಾನಿಸಲಾಗಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಪ್ರಧಾನ ಮಂತ್ರಿಗಳ ಯೋಜನೆಯನ್ನು ಮರೆಮಾಚುತ್ತಿದೆ. ಯಾವುದೇ ಕಾರಣಕ್ಕೂ ಮೋದಿ ಅವರ ಶಕ್ತಿಯನ್ನು ತಡೆಯಲು ಸಾದ್ಯವಿಲ್ಲ. ಸಂಚಾರಿ ಆಸ್ಪತ್ರೆಯ ವಾಹನಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುತ್ತಿದ್ದು, ಮೂರು ತಿಂಗಳಿಂದ ಅವರ ಭಾವಚಿತ್ರ ತೆಗೆದು ಹಾಕಿ, ಇನ್ನೊಂದು ಭಾಗದಲ್ಲಿನ ಮೋದಿ ಅವರ ಮುಖವನ್ನು ಕಿತ್ತುಹಾಕಿರುವುದು ದೇಶದ ಪ್ರಧಾನಿಗೆ ಇಲಾಖೆ ಮಾಡಿದ ಅವಮಾನ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಿ ಗುತ್ತಿಗೆದಾರರನ ಟೆಂಡರ್ ರದ್ದುಪಡಿಸುವಂತೆ ಮುರಿಗೆಪ್ಪ ಶೆಟ್ಟರ, ಶಂಭಣ್ಣ ಬಿದರಿ, ಶಿವಣ್ಣ ಬೆನಕನಕೊಂಡ, ಹರೀಶ ಕಲಕಟ್ಟಿ, ನಾಗಪ್ಪ ಮೊಟೇಬೆನ್ನೂರ, ಶಿವಯೋಗಿ ಶಿರೂರು ಇತರರು ಒತ್ತಾಯಿಸಿದರು.

ಸಂಚಾರಿ ಆಸ್ಪತ್ರೆಯ ವಾಹನದ ಸಂಪೂರ್ಣ ನಿರ್ವಹಣೆಯನ್ನು ಮುಂಬೈನ ಎಜುಸ್ಮಾರ್ಟ್ ಏಜೆನ್ಸಿಯವರು ಮಾಡುತ್ತಿದ್ದಾರೆ. ಭಾವಚಿತ್ರ ತೆಗೆದುಹಾಕಿ ಹೊಸದಾಗಿ ಅಳವಡಿಸುವುದಾಗಿ ತಿಳಿಸಿದ್ದಾರೆ. ಘಟನೆ ಆಧರಿಸಿ ಸಂಜೆಯೊಳಗೆ ಪ್ರಧಾನ ಮಂತ್ರಿಗಳ ಭಾವಚಿತ್ರ ಅಳವಡಿಸಲು ನಿರ್ದೇಶಿಸಲಾಗಿದೆ.I ಎನ್.ಎಸ್. ಚೌಡಾಳತಾಲೂಕು ಪಶುವೈದ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net