ಸೆ.3 ರಿಂದ ರಾಜ್ಯಾದ್ಯಂತ ಸೀರತ ಅಭಿಯಾನ; ಮಹೆಬೂಬ ಅಲಿ ಬಳಗಾನೂರ

JAMA ATE ISLAMI HIND PRESS MEET
ವಿಜಯಪುರ ನಗರದ ಖಾಸಗಿ ಹೊಟೇಲ್‌ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ಅಧ್ಯಕ್ಷ ಮಹೆಬೂಬ ಅಲಿ ಬಳಗಾನೂರ ಸುದ್ದಿಗೋಷ್ಠಿ ನಡೆಸಿದರು. ಸದಸ್ಯರಾದ ಎಂ.ಡಿ ಅಬ್ದುಲ್ ಕದೀರ್, ಯೂಸುಫ್ ಖಾಝಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜೀವನ, ತತ್ವ, ಸಂದೇಶ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆ.3 ರಿಂದ 14 ರ ವರೆಗೆ ಸೀರತ್ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಘಟಕದ ಅಧ್ಯಕ್ಷ ಮಹೆಬೂಬ ಅಲಿ ಬಳಗಾನೂರ ತಿಳಿಸಿದರು.

ಪ್ರವಾದಿ ಮಹ್ಮದ್ ಪೈಗಂಬರ್ ಹಾಗೂ ಇಸ್ಲಾಂ ಧರ್ಮದ ಬಗ್ಗೆ ಕೆಲವು ತಪ್ಪು ಅಭಿಪ್ರಾಯ, ಕಲ್ಪನೆ ಹರಡುತ್ತಿದ್ದಾರೆ. ಹೀಗಾಗಿ ಇಸ್ಲಾಂ ಹಾಗೂ ಅನ್ಯ ಧರ್ಮಿಯರಿಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಅಲ್ಲದೇ, ಧರ್ಮ, ಧರ್ಮಗಳ ನಡುವೆ ಶಾಂತಿ, ಸೌಹಾರ್ದ, ಸಹೋದರತೆ, ಸಹಾನುಭೂತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶಗಳಲೊಂದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈ ಅಭಿಯಾನದ ಅಂಗವಾಗಿ ವಿಜಯಪುರ ನಗರವೂ ಸೇರಿದಂತೆ ಜಿಲ್ಲೆಯಲ್ಲಿ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆ ಹಾಗೂ ಅನಾಥ ಆಶ್ರಯಕ್ಕೆ ಭೇಟಿ, ಸಂವಾದ ನಡೆಸಲಾಗುವುದು. ಪ್ರವಾದಿ ಮಹ್ಮದ್ ಪೈಗಂಬರ್ ಅವರು ಸಾಮಾಜಿಕ ಸಮಾನತೆಗೆ ಆದ್ಯತೆ ನೀಡಿದ್ದರು. ಶಿಕ್ಷಣದಲ್ಲಿ ಜ್ಞಾನದ ಜೊತೆ ವೈಚಾರಿಕತೆ ಇರಬೇಕು ಎಂದು ಪ್ರತಿಪಾದಿಸಿದ್ದರು. ಮಹಿಳಾ ವಿಮೋಚಕರಾಗಿದ್ದರು. ಪರಿಸರ ಸಂರಕ್ಷಣೆಗೆ ಒತ್ತು ನೀಡಿದ್ದರು, ಪರಧರ್ಮ ಸಹಿಷ್ಣುತೆಗೆ ಆದ್ಯತೆ ನೀಡಿದ್ದರು ಎಂದು ಅವರು ಹೇಳಿದರು.

ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನದಿಂದ ಪ್ರವಾದಿ ಜೀವನ ಮತ್ತು ಸಂದೇಶ ಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ಅಭಿಯಾನದಲ್ಲಿ ಬಿಡುಗಡೆಯಾಗಲಿವೆ ಎಂದು ವಿವರಿಸಿದರು.

ಸದಸ್ಯರಾದ ಎಂ.ಡಿ ಅಬ್ದುಲ್ ಕದೀರ್, ಯೂಸುಫ್ ಖಾಝಿ, ಸೋಲಿಡಾರಿಟಿ ಯೂಥ್ ಮೂವ್ಮೆಂಟ್ ಅಧ್ಯಕ್ಷ ಅಬ್ದುಲ್ ಹಮೀದ್ ಜಾವೀದ್, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಜಿಲ್ಲಾ ಉಪಾಧ್ಯಕ್ಷ ಉಬೈದೂರ ರಹೇಮನ್ ಶೈಖ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net