

ಹರಿಹರ: ಪ್ರವಾದಿ ಮಹಮದ್ ಕೇವಲ ಮುಸ್ಲಿಂರಿಗಷ್ಟೇ ಅಲ್ಲ, ಇಡೀ ಮಾನವ ಕುಲದ ಒಳಿತಿನ ಬೆಳಕಾಗಿದ್ದರು ಎಂದು ಜಮಾ ಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮದ್ ಕುಂಞಿ ಹೇಳಿದರು.
ನಗರದ ಮರಿಯಾ ಸದನದಲ್ಲಿ ರಾಬಿತಾ-ಎ-ಮಿಲ್ಲತ್ ಹಾಗೂ ಜಮಾ ಅತೆ ಇಸ್ಲಾಮಿ ಹಿಂದ್ ತಾಲೂಕು ಘಟಕದಿಂದ ಮಂಗಳವಾರ ಸೀರತ್ ಅಭಿಯಾನ-2023ದಲ್ಲಿ ಪ್ರವಾದಿ ಮಹಮದ್ ಅವರ ಕುರಿತು ಉಪನ್ಯಾಸ ನೀಡಿದರು.
ಮಹಮದ್ ಅವರು ಮುಸ್ಲಿಂಮರು ಹೇಗೆ ಬದುಕಬೇಕೆಂದು ಹೇಳುವ ಜತೆಗೆ ಅನ್ಯ ಧರ್ಮೀಯರೊಂದಿಗೆ ಹೇಗೆ ಸಾಮರಸ್ಯದಿಂದ ಇರಬೇಕು ಎಂದು ತಿಳಿಸಿದ್ದಾರೆ ಎಂದರು.
ಸಾನ್ನಿಧ್ಯ ವಹಿಸಿದ್ದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಎಲ್ಲ ಧರ್ಮಗಳ ಸಾರ ಒಂದೆ ಆಗಿದೆ. ಮಾನವೀಯತೆ ಬಿಟ್ಟು ಯಾವ ಧರ್ಮವೂ ಇಲ್ಲ. ಈ ಅಂಶವನ್ನು ಅರಿತರೆ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದರು.
ಆರೋಗ್ಯ ಮಾತೆ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಕೆ.ಎ. ಜಾರ್ಜ್ ಮಾತನಾಡಿ, ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಭಿನ್ನತೆಗಳಿವೆ. ಆದರೆ, ನಾವೆಲ್ಲರೂ ಮನುಷ್ಯರು. ನಮಗಿರುವುದೊಂದೆ ಭೂಮಿ ಎಂಬುದನ್ನು ಅರಿತು ಸಾಮರಸ್ಯದಿಂದ ಬದುಕು ನಡೆಸಬೇಕಾಗಿದೆ ಎಂದರು.
ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ. ನಾಗೇಂದ್ರಪ್ಪ ಮಾತನಾಡಿದರು. ಬಿತಾ-ಎ-ಮಿಲ್ಲತ್ ಅಧ್ಯಕ್ಷ ಸೈಯದ್ ಮುನೀರ್ ಸಾಬ್, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಖಯೂಮ್ ವೈ.ಜಿ., ಇಖ್ಬಾಲ್ ಸಾಬ್ ಮಕಾಂದಾರ್, ಡಾ.ಗುಲಾಮ್ ನಬಿ, ಪ್ರೊ.ಎಚ್.ಎ. ಭಿಕ್ಷಾವರ್ತಿ ಮಠ, ಎಚ್. ಮಲ್ಲೇಶ್ ಮತ್ತಿತರರಿದ್ದರು.