

ಹುಣಸೂರು : ಪ್ರವಾದಿ ಮಹಮದ್ ಪೈಗಂಬರ್ ಜೀವನ ಸಂದೇಶಗಳನ್ನು ಸಾರುವ ನಿಟ್ಟಿನಲ್ಲಿ ಸೆ.9ರಂದು ಹುಣಸೂರಿನಲ್ಲಿ ಸೀರತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್‌ನ ಮೈಸೂರು ವಲಯ ಸಂಚಾಲಕ ಅಬುಸ್ಸಲಮ್ ಉಪ್ಪಿನಂಗಡಿ ತಿಳಿಸಿದರು.
ಪೈಗಂಬರ್‌ಜಯಂತಿ ಅಂಗವಾಗಿ ಸೆ.3ರಿಂದ 14ರವರೆಗೆ ಅಭಿಯಾನ ನಡೆಯಲಿದ್ದು, ವಿವಿಧ ಧರ್ಮೀಯರ ನಡುವಿನ ಪರಸ್ಪರ ಬಾಂಧವ್ಯ ಬಲಪಡಿಸುವುದು ಮೂಲ ಉದ್ದೇಶವಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಸೆ.9ರಂದು ನಗರದ ಬೈಪಾಸ್ ರಸ್ತೆಯ ಖಾಸಗಿ ಸಭಾಂಗಣದಲ್ಲಿ ಸಮಾವೇಶ ಆಯೋಜಿಸಲಾಗಿದೆ. ರಮ್ಮನಹಳ್ಳಿ ಭಾವೈಕ್ಯ ಕೇಂದ್ರದ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದವರು ವಿವರಿಸಿದರು.
ಮಂಗಳೂರಿನ ಶಾಂತಿಪ್ರಕಾಶನ ಹೊರತಂದಿರುವ ಪ್ರವಾದಿಗಳ ಜೀವನಾದರ್ಶದ ಎರಡು ಪುಸ್ತಕಗಳನ್ನು ಗಣ್ಯರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆ ಗೊಳಿಸಿದರು. ಸಂಘಟನೆಯ ಸ್ಥಾನೀಯ ಅಧ್ಯಕ್ಷ ಪಿ.ಎ.ಮುಸ್ತಫಾ, ಸದಸ್ಯರಾದ ಮಹಮದ್ ಅಜೀಜುಲ್ಲಾ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನಿಕಟಪೂರ್ವ ಅಧ್ಯಕ್ಷ ಎನ್. ಗೋವಿಂದೇಗೌಡ ಇತರರು ಹಾಜರಿದ್ದರು.