

ಹುಬ್ಬಳ್ಳಿ: ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಯಾರೂ ಮಾಡಬಾರದು ಎಂದು ಹಳೇ ಹುಬ್ಬಳ್ಳಿ ನಾಗಲಿಂಗನಗರದ ಶ್ರೀರಾಜ ವಿದ್ಯಾಶ್ರಮದ ಶ್ರೀ ಷಡಕ್ಷರಿ ಸ್ವಾಮೀಜಿ ಮನವಿ ಮಾಡಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 12 ವರ್ಷಗಳ ಹಿಂದಿನ ಸೌಜನ್ಯಾ ಕೊಲೆ ಪ್ರಕರಣದ ಆರೋಪಿಗಳು ಕಾನೂನಿನ ಕೈಯಿಂದ ತಪ್ಪಿಸಿಕೊಂಡರೂ ಸಹ ಭಗವಂತನ ಕೈಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಕೆಲವರು ವಿನಾಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದು, ಧಾರ್ವಿುಕ ಭಾವನೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಜ್ಞಾನದಿಂದ ಕೂಡಿದ ಕೆಲ ದುಷ್ಟಶಕ್ತಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ನಡೆಸುತ್ತಿರುವುದು ವಿಷಾದದ ಸಂಗತಿ. ಇಂಥ ಘಟನೆಗಳು ನಡೆದಾಗ ಕಾನೂನು ತನ್ನ ಕರ್ತವ್ಯ ಹಾಗೂ ನಿಯಮವನ್ನು ಪಾಲಿಸುತ್ತದೆ. ಈ ಪ್ರಕರಣದ ಕುರಿತು ಅವಶ್ಯಕತೆ ಎದುರಾದರೆ ಮರು ತನಿಖೆಗೆ ಆದೇಶಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದನ್ನು ಸ್ವಾಗತಿಸುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗಂಗಾಧರ ದೊಡವಾಡ, ಶಿವಶಂಕರ ಗಚ್ಚಿನವರ, ವೀರುಪಾಕ್ಷಪ್ಪ ಕಳ್ಳಿಮನಿ, ಇತರರು ಇದ್ದರು.