ತಾನೋದಿದ ಶಾಲೆಯಲ್ಲೇ ಮುಖ್ಯ ಶಿಕ್ಷಕ!

1
ಈಚೆಗೆ ಹಳೇ ವಿದ್ಯಾರ್ಥಿಗಳು ನಿವೃತ್ತ ಮುಖ್ಯ ಶಿಕ್ಷಕ ವೀರಪ್ಪ ಅಗಡಿ ಅವರನ್ನು ಸತ್ಕರಿಸಿದರು.
Published on

ಕಡುಬಡತನದಲ್ಲಿ ಶಿಕ್ಷಣದ ತೇರು ಎಳೆದ ವೀರಪ್ಪ ಬಡಮಕ್ಕಳಿಗೆ ಕಷ್ಟಕ್ಕೆ ಮಿಡಿದ ಕರುಣಾಮಯಿ

ಪ್ರಶಾಂತ ಹೂಗಾರ ಬೆಳಗಾವಿ
ಪವಿತ್ರ ವೃತ್ತಿಯಲ್ಲೊಂದಾದ ಗುರು ಸ್ಥಾನ ಅಲಂಕರಿಸುವುದು ಎಲ್ಲರಿಂದ ಸಾಧ್ಯವಿಲ್ಲ. ಆದರೆ, ತಾನು ಪಾಠ ಕಲಿತ ಶಾಲೆಯಲ್ಲೇ ಶಿಕ್ಷಕರಾಗುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಅಂಥ ಅದೃಷ್ಟ ಒಲಿದುಬಂದದ್ದು ಶಿಕ್ಷಕ ವೀರಪ್ಪ ರುದ್ರಪ್ಪ ಅಗಡಿ ಅವರಿಗೆ.

1948 ಜೂನ್ 6ರಂದು ಸವದತ್ತಿ ತಾಲೂಕಿನ ಹಂಚಿನಾಳ ಗ್ರಾಮದ ಬಡಕುಟುಂಬದಲ್ಲಿ ಜನಿಸಿದ ಅವರು ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿವಿಧೆಡೆ ಪ್ರೌಢಶಿಕ್ಷಣದೊಂದಿಗೆ ಟಿಸಿಎಚ್ ಮುಗಿಸಿದರು. ಬಡತನದ ಗಿರಣಿಗೆ ಸಿಕ್ಕು ಶಿಕ್ಷಣ ಮೊಟಕುಗೊಳಿಸಿ ನೀರಾವರಿ ಇಲಾಖೆಯ ಮೊಕಾದ್ದಮ್ ಉದ್ಯೋಗದತ್ತ ಮುಖ ಮಾಡಿದರು. ಹಣ ಕೂಡಿಟ್ಟು 1975ರಲ್ಲಿ ಮೈಸೂರು ಯುನಿರ್ವಸಿಟಿಯಿಂದ ದೂರಶಿಕ್ಷಣದ ಮೂಲಕ ಪಿಯುಸಿ, 1981ರಲ್ಲಿ ಬಿಎ ಪದವಿ ತೇರ್ಗಡೆಯಾದರು.

ಹಳೇ ಯೋಜನೆಯಡಿ ಲೋಕಲ್ ಕ್ಯಾಂಡಿಡೇಟ್ ಆಗಿ 1971-72ರಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ವಿವಿಧೆಡೆ ಕೆಲಸ ಮಾಡಿದರು. 1973ರಲ್ಲಿ ಕಾಯಂ ಶಿಕ್ಷಕರಾಗಿ ನೇಮಕಗೊಂಡು 27 ವರ್ಷಗಳ ಸುದೀರ್ಘ ಸೇವೆ ಬಳಿಕ 2001ರಲ್ಲಿ ಹಂಚಿನಾಳದ ಕಲಿತ ಶಾಲೆಗೆ ಮುಖ್ಯ ಶಿಕ್ಷಕರಾದರು. ಇವರ ಕೈಯಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ತಹಸೀಲ್ದಾರ್, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್, ಕಂಡಕ್ಟರ್, ಶಿಕ್ಷಕ ಸೇರಿ ಇತರ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಧನೆ ಗುರುತಿಸಿ 1994-95ರಲ್ಲಿ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ ಹಾಗೂ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. 2006ರ ಜೂನ್ 30ರಂದು ಮುನವಳ್ಳಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ್ದಾರೆ.

ಗ್ರಾಮದ ಅಭಿವೃದ್ಧಿಗೆ ಸಲಹೆ: ಕೇವಲ ಮಕ್ಕಳಿಗೆ ಮಾರ್ಗದರ್ಶಕರಾಗಿರದೆ ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ತೊಡಗಿಸಿಕೊಂಡು ಪ್ರಗತಿಗೆ ಪೂರಕವಾದ ಸಲಹೆ ನೀಡುತ್ತಿದ್ದರು. ಸದಾ ಶಿಸ್ತಿನಿಂದ ಇರುತ್ತಿದ್ದ ಇವರು ರಾಷ್ಟ್ರೀಯ ಹಬ್ಬಗಳ ಆಚರಣೆಯ ನೇತೃತ್ವ ವಹಿಸಿ, ಗ್ರಾಮದ ಜನರಲ್ಲಿ ರಾಷ್ಟ್ರಭಕ್ತಿ ಬೆಳೆಸುವಲ್ಲಿ ಸದಾ ಮುಂದಿದ್ದರು. ಮುಖ್ಯ ಶಿಕ್ಷಕನಾದ ಮಾತ್ರಕ್ಕೆ ಎಲ್ಲರ ಮೇಲೆ ಅಧಿಕಾರ ಚಲಾಯಿಸುವ ಬದಲು ಮುಂದಾಳತ್ವದಿಂದ ಕೆಲಸ ಮಾಡಬೇಕು. ಹಾಗಾದಾಗ ಎಲ್ಲರೂ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೆ ಎನ್ನುವುದು ವೀರಪ್ಪ ಮಾತು.

ಬಡ ಮಕ್ಕಳಿಗೆ ಸಹಾಯ, ಹೆಚ್ಚುವರಿ ಕ್ಲಾಸ್: ಶಾಲೆಯ ಬಡಮಕ್ಕಳ ಕಷ್ಟ ಕಂಡು ಮರಗುತ್ತಿದ್ದ ವೀರಪ್ಪ ಅವರು ತಮ್ಮ ವೇತನದಲ್ಲೇ ಬಡಮಕ್ಕಳಿಗೆ ಶುಲ್ಕ, ಪುಸ್ತಕಗಳನ್ನು ನೀಡಿ ಶಿಕ್ಷಣಕ್ಕೆ ಅಣಿಗೊಳಿಸಿದ್ದಾರೆ. ಮುಖ್ಯ ಶಿಕ್ಷಕರಾಗಿದ್ದುಕೊಂಡೇ ದೈಹಿಕ ಶಿಕ್ಷಣದ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಶಾಲಾ ಅವಧಿ ಬಳಿಕ ಮಕ್ಕಳಿಗೆ ಉಚಿತವಾಗಿ ನವೋದಯ, ಮುರಾರ್ಜಿ, ಸೈನಿಕ ಪರೀಕ್ಷೆ ತಯಾರಿ ಕುರಿತು ಪಾಠ ಮಾಡುತ್ತಾ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶ್ರಮಿಸಿದ್ದಾರೆ.

ಶಿಕ್ಷಕರೆಂದ ಮಾತ್ರಕ್ಕೆ ವಿದ್ಯಾರ್ಥಿಗಳ ಮೇಲೆ ಅಧಿಕಾರ ಚಲಾಯಿಸುವುದಲ್ಲ. ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಪಾಠ ಮಾಡುವ ಜತೆಗೆ ಅವರ ಸರ್ವಾಂಗೀಣ ಅಭಿವೃದ್ದಿಗೆ ದುಡಿಯಬೇಕು. ಮಕ್ಕಳ ಮನಸ್ಥಿತಿ ಅರಿತು ಅವರೊಡನೆ ವರ್ತಿಸಬೇಕು. ಅಂದಾಗ ಉತ್ತಮ ಶಿಕ್ಷಕರಾಗಲು ಸಾಧ್ಯ. ವೀರಪ್ಪ ಅಗಡಿ, ನಿವೃತ್ತ ಮುಖ್ಯ ಶಿಕ್ಷಕ

ವೀರಪ್ಪ ಅಗಡಿ, ನಿವೃತ್ತ ಮುಖ್ಯ ಶಿಕ್ಷಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net