

ಮಡಿಕೇರಿ: ಪೋಷಣ್ ಮಾಸಾಚರಣೆ ಅಂಗವಾಗಿ ತಾವೂರು ಅಂಗನವಾಡಿ ಕೇಂದ್ರದಲ್ಲಿ ಸೀಮಂತ ಕಾರ್ಯಕ್ರಮ ಮತ್ತು ಪೋಷಣ್ ಕುರಿತು ಗ್ರಾಮಸ್ಥರಿಗೆ ಅರಿವು ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಗರ್ಭಿಣಿ ಹಾಗೂ ಅವರ ಕುಟುಂಬದವರಿಗೆ ಗರ್ಭಾವಸ್ಥೆ ಮತ್ತು ಶೈಶಾವ್ಯವಸ್ಥೆಯಲ್ಲಿ ಪೌಷ್ಟಿಕ ಆಹಾರದ ಮಹತ್ವ ಮತ್ತು ಮಗುವಿನ ಸಾವಿರ ದಿನಗಳ ಪ್ರಾಮುಖ್ಯತೆ, ಕಡಿಮೆ ತೂಕದ ಜನನ ಮಕ್ಕಳ ಮರಣ ತಡೆಗಟ್ಟುವಲ್ಲಿ ಪೌಷ್ಟಿಕ ಆಹಾರದ ಸೇವನೆಯ ಮಹತ್ವ ತಿಳಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಮತ್ತು ಪೋಷಕರ ಹೆಸರಿನಲ್ಲಿ ಪೌಷ್ಟಿಕ ಕೈತೋಟ ನಿರ್ಮಾಣ ಮಾಡುವುದರೊಂದಿಗೆ ಮನೆಗಳಲ್ಲಿ ಪೌಷ್ಟಿಕ ಕೈತೋಟ ಮಾಡಲು ಪ್ರೋತ್ಸಾಹಿಸಿದರು. ಸ್ತ್ರೀ ಶಕ್ತಿ ಗುಂಪಿನ ಸದಸ್ಯರಿಗೆ ಮತ್ತು ಗ್ರಾಮಸ್ಥರಿಗೆ ಪೌಷ್ಟಿಕ ಆಹಾರದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆ ಹೇಮಲತಾ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮಿತಾ, ಪ್ರಮುಖರಾದ ರೋಹಿಣಿ, ಆಶಾ ಕಾರ್ಯಕರ್ತೆ ಶೈಲಜಾ ಸೇರಿದಂತೆ ಕೋಕಿಲ ಸ್ತ್ರೀಶಕ್ತಿ ಗುಂಪು, ಮೈತ್ರಿ ಶ್ರೀ ಶಕ್ತಿ ಗುಂಪು, ಭಾಗ್ಯಲಕ್ಷ್ಮಿ ಶ್ರೀ ಶಕ್ತಿ ಗುಂಪಿನ ಸದಸ್ಯರುಗಳು ಪಾಲ್ಗೊಂಡಿದ್ದರು.