

ಬೆಂಗಳೂರು : ಬ್ರಾಹ್ಮಣರೆಂದರೆ ಭಗವಂತನನ್ನು ಅನ್ವೇಷಿಸುವವರು ಎಂದರ್ಥ. ಆಚರಣೆ, ಇತಿಹಾಸ, ಹಿಂದೂ ಸಮಾಜದ ಐಕ್ಯತೆಯನ್ನು ಕಾಪಾಡುವುದು ಬ್ರಾಹ್ಮಣರ ಬಹುದೊಡ್ಡ ಜವಾಬ್ದಾರಿ. ಇಲ್ಲಿ ಜಾತಿಗಿಂತ ಸನಾತನ ಧರ್ಮ ರಕ್ಷಣೆ ಪ್ರಮುಖ ಅಂಶ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ (ಎಕೆಬಿಎಂಎಸ್) ಸುವರ್ಣ ಸಂಭ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಬ್ರಾಹ್ಮಣ ಮಹಾ ಸಮ್ಮೇಳನದಲ್ಲಿ ಮುಖ್ಯಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಜಾತಿಯ ಬದಲಾಗಿ ಗುಣಕ್ಕೆ ಮಾನ್ಯತೆ ಕೊಡುವುದು ಬ್ರಾಹ್ಮಣರ ರೂಢಿ. ರಾಮಾಯಣದಲ್ಲಿ ಬ್ರಾಹ್ಮಣನಾಗಿದ್ದ ರಾವಣನ ಬದಲು ಪುರುಷೋತ್ತಮನಾಗಿದ್ದ ಶ್ರೀರಾಮನನ್ನ, ರಾಮಾಯಣದ ನಿರ್ಮಾಪಕ ವಾಲ್ಮೀಕಿಯನ್ನು ಪೂಜಿಸುವ ಮೂಲಕ ಗುಣಕ್ಕೆ ಆದ್ಯತೆ ನೀಡಲಾಗಿದೆ. ಕೃಷ್ಣ, ಕನಕದಾಸ, ಕಬೀರ ಇಂತಹ ಅನೇಕರು ಬ್ರಾಹ್ಮಣರಲ್ಲದಿದ್ದರೂ ಅವರನ್ನು ಗೌರವಿಸುವ ಮೂಲಕ ಶ್ರೇಷ್ಠ ಪರಂಪರೆಯನ್ನು ಗೌರವಿಸಿದ್ದೇವೆ. ನಮ್ಮ ಸಂಸ್ಕೃತಿ, ಪರಂಪರೆ, ನಂಬಿಕೆಯ ಮೇಲೆ ಪರಕೀಯರಿಂದ ಹಲವು ಆಕ್ರಮಣಗಳಾಗಿವೆ. ಆದರೆ ದುರಾದೃಷ್ಟವಶಾತ್ ಇತ್ತೀಚೆಗೆ ನಮ್ಮಲ್ಲೇ ಹುಟ್ಟಿದ ಕೆಲವರು ಸನಾತನ ಧರ್ಮ, ಸಂಸ್ಕೃತಿಯನ್ನು ಕಿತ್ತೊಗೆಯುವ ಮಾತನಾಡುತ್ತಿದ್ದಾರೆ. ಈ ಬಗ್ಗೆ ಜಾಗೃತವಾಗಿರುವಂತೆ ಜೋಶಿ ಎಚ್ಚರಿಸಿದರು.