

ಮೈಸೂರು: ಕೇಸರಿ ಬಣ್ಣ, ಕಮಲದ ಹೂವು ಕಂಡರೆ ಕಾಂಗ್ರೆಸ್ ಸರ್ಕಾರಕ್ಕೆ ಭಯ ಇದೆ. ಹನುಮ ಧ್ವಜ ವಿವಾದ ಸರ್ಕಾರದ ಹತಾಶೆಯ ನಡೆಯಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಬಿಜೆಪಿ ಮುಖಂಡ ಭಾಸ್ಕರ್‌ರಾವ್ ದೂರಿದರು.
ನಗರದಲ್ಲಿ ಗುರುವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೆರಗೋಡು ಗ್ರಾಮದ ಹನುಮ ಧ್ವಜ ವಿವಾದಕ್ಕೆ ರಾಜ್ಯ ಸರ್ಕಾರವೇ ನೇರ ಕಾರಣ. ಸೂಕ್ಷ್ಮ ವಿಚಾರಗಳನ್ನು ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದೆ. ಖಾಸಗಿ ಸ್ಥಳದಲ್ಲಿ ಹನುಮ ಧ್ವಜ ಹಾರಿಸಿದರೆ ಏನು ಸಮಸ್ಯೆ. ಅನೇಕ ಕಡೆ ಧ್ವಜಸ್ತಂಭಗಳಿಗೆ ರಾಷ್ಟ್ರ ನಾಯಕರ ಫೋಟೋಗಳನ್ನು ಹಾಕಿರುತ್ತಾರೆ. ಈಗಾಗಲೇ ಹಾಕಿರುವ ಎಲ್ಲವನ್ನು ಕಿತ್ತೆಸೆಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಕೇಸರಿ ಬಣ್ಣ, ಕಮಲದ ಹೂವು ಕಂಡರೆ ಕಾಂಗ್ರೆಸ್ ನಾಯಕರಿಗೆ ಆಗುವುದಿಲ್ಲ. ಶಿಕ್ಷಕಿ ಕೈಯಲ್ಲಿ ಕಮಲದ ಹೂವು ಹಿಡಿದರೂ ನೋಟಿಸ್ ಕೊಡುತ್ತಿದ್ದಾರೆ. ಚಾಮರಾಜನಗರದಲ್ಲಿ ಖ್ಯಾತ ಸಂಗೀತ ನಿರ್ದೇಶಕರೊಬ್ಬರು ರಾಮನ ಹಾಡು ಹೇಳಿದರೆ ಸಚಿವರು ಕಾರ್ಯಕ್ರಮದಿಂದಲೇ ಹೊರ ನಡೆಯುತ್ತಾರೆ. ಇದು ಕಾಂಗ್ರೆಸ್ ಸರ್ಕಾರದ ಹತಾಶ ಸ್ಥಿತಿಯನ್ನು ತೋರಿಸುತ್ತಿದೆ ಎಂದರು.
ಅಯೋಧ್ಯೆಯಲ್ಲಿ ಬಾಲರಾಮ ಮೂರ್ತಿ ಪ್ರತಿಷ್ಠಾಪನೆ ನಂತರ ಕಾಂಗ್ರೆಸ್ ಕಂಗಾಲಾಗಿ ಹೋಗಿದೆ. ಇದೇ ಕಾರಣದಿಂದ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾಗಿದೆ. ಅಲ್ಪಸಂಖ್ಯಾತರಿಗೂ ಕಾಂಗ್ರೆಸ್ ಸರ್ಕಾರದ ಮೋಸದ ಭಾವನೆ ಅರ್ಥವಾಗಿದೆ. ದೇಶದಲ್ಲಿ ಕಾಂಗ್ರೆಸ್ ಸೂತ್ರ ಹಿಡಿದಿರುವ ನಾಯಕರೇ ಸರಿ ಇಲ್ಲ. ದೇಶದ ಆಚೆ ಹೋಗಿ ಭಾರತ ವಿರೋಧಿಗಳನ್ನು ಒಗ್ಗೂಡಿಸುವ ಪ್ರಯತ್ನ ಫಲ ಕೊಡುವುದಿಲ್ಲ. ಇಂಡಿಯಾ ಒಕ್ಕೂಟದಿಂದ ಎಲ್ಲ ಮೈತ್ರಿ ಪಕ್ಷಗಳು ಹೊರ ನಡೆಯುತ್ತಿವೆ. ಬಿಜೆಪಿ ಬಿಟ್ಟು ಹೋಗಿದ್ದ ಜಗದೀಶ ಶೆಟ್ಟರ್ ಅವರಂತಹ ನಾಯಕರು ಬಿಜೆಪಿಗೆ ಮರಳಿದ್ದಾರೆ. ಇದೆಲ್ಲವನ್ನು ಸಹಿಸಲು ಆಗದ ಕಾಂಗ್ರೆಸ್ ನಾಯಕರು ಸಣ್ಣ ವಿಚಾರವನ್ನೂ ವಿವಾದ ಮಾಡುತ್ತಿದ್ದಾರೆ ಎಂದು ದೂರಿದರು.