

ಬೀಜೋಪಚಾರ ಮಾಡಿ, ಮಣ್ಣಿನಿಂದ ಹರಡುವ ರೋಗಗಳನ್ನು ತಡೆಗಟ್ಟಿರಿ ಎಂದು ಸುತ್ತೂರು ಕೃಷಿ ವಿಜ್ಞಾನ ಕೇಂದ್ರದ ಬೀಜ ವಿಜ್ಞಾನಿ ಎಚ್.ವಿ.ದಿವ್ಯಾ ರೈತರಿಗೆ ಸಲಹೆ.
ಮೈಸೂರು ತಾಲೂಕು ವರುಣಾ ಹೋಬಳಿಯ ಸಜ್ಜೆ ಹುಂಡಿ ಗ್ರಾಮದಲ್ಲಿ ಶ್ರೀನಿವಾಸನ್ ಸರ್ವಿಸಸ್ ಟ್ರಸ್ಟ್ ಸಿಂಧುವಳ್ಳಿ ಮತ್ತು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರ ವರುಣ ಇವರ ಜಂಟಿ ಸಹಭಾಗಿತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸುರಕ್ಷಿತ ಕೀಟನಾಶಕಗಳ ಬಳಕೆ ಮತ್ತು ಬೀಜೋಪಚರ ಆಂದೋಲನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೀಜೋಪಚಾರ ಮಾಡದೇ ಹಾಗೂ ಪ್ರಮಾಣಿತ ಬಿತ್ತನೆ ಬೀಜಗಳನ್ನು ಉಪಯೋಗಿಸದೇ ಇರುವುದರಿಂದ ರೈತರ ಬೆಳೆಯು ಹೆಚ್ಚಾಗಿ ರೋಗ ಬಾಧೆಗೆ ತುತ್ತಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳೆಗಳಿಗೆ ತಗಲುವ ಭಾಗಶಃ ರೋಗಗಳು ಮಣ್ಣಿನಿಂದಲೇ ಬೀಜ ಪ್ರವೇಶಿಸಿ, ಬೆಳೆಗಳಿಗೆ ಬಾಧೆ ನೀಡುತ್ತವೆ. ರೈತರು ಇದರಿಂದ ಶೇ. 30 ರಿಂದ ಶೇ. 60 ರಷ್ಟು ಇಳುವರಿಯ ನಷ್ಟ ಅನುಭವಿಸಬೇಕಾಗುತ್ತದೆ ಎಂದರು.
ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ ದೊರೆಯುವ ಜೀವಾಣು ಗೊಬ್ಬರಗಳನ್ನು ಹಾಗೂ ರೋಗ ಕೀಟನಾಶಕಗಳನ್ನು ಒಂದು ಕೆಜಿ ಬೀಜಕ್ಕೆ 4 ಗ್ರಾಂ ನಂತೆ ಬೆರೆಸಿ, ನೆರಳಿನಲ್ಲಿ 1 ರಿಂದ 2 ಗಂಟೆ ಒಣಗಿಸಿ, ನಂತರ ಬಿತ್ತನೆ ಮಾಡುವುದರಿಂದ ಬೀಜಗಳಿಗೆ ರಕ್ಷಾ ಕವಚವಾಗಿ ಇವು ಕೆಲಸ ನಿರ್ವಹಿಸುತ್ತವೆ. ನಂತರ ರೈತರು ಕೀಟನಾಶಕ ಅಥವಾ ರೋಗನಾಶಕಗಳನ್ನು ಸಿಂಪಡಣೆ ಮಾಡುವಾಗ ಕಡ್ಡಾಯವಾಗಿ ಮುಖಗವಸು, ಕೈಚೀಲ, ಮಾಸ್ಕ್, ಕನ್ನಡಕ ಮತ್ತು ಸಂಪೂರ್ಣ ಕಿಟ್ ಅನ್ನು ಧರಿಸಿ ಸಿಂಪರಣೆ ಮಾಡಬೇಕೆಂದು ಸಲಹೆ ನೀಡಿದರು.
ಮೈಸೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಡಾ.ಎಚ್.ಬಿ.ಮಧುಲತಾ ಮಾತನಾಡಿ, ನಮ್ಮ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ಪ್ರಮಾಣಿತ ಬಿತ್ತನೆ ಬೀಜಗಳು, ಸಸ್ಯ ಸಂರಕ್ಷಣಾ ಔಷಧಗಳು, ಜೈವಿಕ ಗೊಬ್ಬರಗಳನ್ನು ವಿತರಣೆ ಮಾಡಲಾಗುತ್ತಿದೆ. ಮುಖ್ಯವಾಗಿ ಭತ್ತ, ರಾಗಿ, ಮುಸುಕಿನ ಜೋಳ, ದ್ವಿದಳ ಧಾನ್ಯಗಳು, ತರಕಾರಿ ಬೆಳೆಗಳು ಸೇರಿದಂತೆ ಎಲ್ಲ ಬೆಳೆಗಳಿಗೂ ಸಹ ಬೀಜೋಪಚಾರ ಮಾಡುವುದು ಬಹಳ ಮುಖ್ಯ ಎಂದರು.
ಕೃಷಿ ಇಲಾಖೆಯಿಂದ ರೈತರಿಗೆ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆಯೂ ಕೂಡಾ ಮಾಹಿತಿ ನೀಡಿ,ರೈತರು ಮತ್ತು ರೈತ ಮಹಿಳೆಯರು ಈ ಎಲ್ಲ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾ.ಪಂ ಅಧ್ಯಕ್ಷೆ ಸಾಕಮ್ಮ, ಕೃಷಿ ಅಧಿಕಾರಿ ಆನಂದ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಎಸ್.ಜೆ.ಹೇಮಂತ್, ಟಿ.ವಿ.ಎಸ್ ಸಂಸ್ಥೆಯ ಗ್ರಾಮಾಭಿವೃದ್ದಿ ಅಧಿಕಾರಿ ಕುಮಾರ್,ಸಹಾಯಕರಾದ ಪ್ರಸನ್ನ,ಸೋಮು,ಕೃಷಿಸಖಿ ಜಯಕುಮಾರಿ, ಮುಖಂಡರಾದ ವಾಸುದೇವ, ರವಿ ಮತ್ತು ರೈತರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತವಾಗಿ ರಾಗಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಯಿತು. ಸಮಗ್ರ ಪೋಷಕಾಂಶಗಳನ್ನು ಬಳಸಿಕೊಂಡು,ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ರೈತರು ಉತ್ತಮ ಇಳುವರಿ ಪಡೆದು, ತಮ್ಮ ಆದಾಯವನ್ನು ಹೆಚ್ಚಳ ಮಾಡಿಕೊಳಬೇಕೆಂಬುದು ಈ ಯೋಜನೆಯಡಿ ನೀಡುವ ಪ್ರಾತ್ಯಕ್ಷಿಕೆಯ ಉದ್ದೇಶವಾಗಿದೆ.