ಮತದಾರರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ನೋಡಿ

Bommayi new
Published on

ಹುಬ್ಬಳ್ಳಿ : ಸಚಿವ ಶಿವರಾಜ ತಂಗಡಗಿ ಅವರು ಕೆಲವೇ ದಿನಗಳವರೆಗೆ ತಾಳ್ಮೆಯಿಂದ ಕಾಯಬೇಕು. ಮತದಾರರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ಎಂಬುದು ಬಹಿರಂಗಗೊಳ್ಳುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಈ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ರಾಜ್ಯದ ಹಲವಾರು ಕ್ಷೇತ್ರಗಳಿಗೆ ಬಿಜೆಪಿ ರಾಷ್ಟ್ರೀಯ ನಾಯಕರು ಭೇಟಿ ನೀಡಿ, ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಎರಡ್ಮೂರು ದಿನಗಳಲ್ಲಿ ಕಾರ್ಯಕ್ರಮಗಳು ನಿಗದಿಗೊಳ್ಳಲಿವೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವಾರು ರಾಷ್ಟ್ರೀಯ ನಾಯಕರು ಹಾವೇರಿ, ಧಾರವಾಡ ಲೋಕಸಭೆ ಕ್ಷೇತ್ರಗಳಲ್ಲಿಯೂ ಪ್ರಚಾರ ನಡೆಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯ ಬಿಜೆಪಿಯಲ್ಲಿ ತಲೆದೋರಿದ್ದ ಅಸಮಾಧಾನ ಶಮನ ಆಗುತ್ತಿದೆ. ಸಂಗಣ್ಣ ಕರಡಿ ಅವರು ಈಗಾಗಲೇ ಸಮಾಧಾನ ಆಗಿದ್ದಾರೆ ಎಂದ ಬೊಮ್ಮಾಯಿ, ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರು ಪಕ್ಷಕ್ಕೆ ಮರಳಿದ್ದು ಸ್ವಾಗತಾರ್ಹ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಅವರ ಪ್ರಭಾವ ಹೆಚ್ಚು ಇದೆ. ಅವರಿಂದ ಪಕ್ಷಕ್ಕೆ ಲಾಭ ಆಗಲಿದೆ ಎಂದರು.

ರಾಜ್ಯ ಸರ್ಕಾರ ಅಧೋಗತಿಗೆ ಹೋಗಿದೆ. ಅದೇ ಕಾರಣಕ್ಕೆ ಸುಪ್ರೀಂ ಕೋರ್ಟ್ ಮೆಟ್ಟಿಲು ಏರಿದೆ. ನ್ಯಾಯಾಲಯದ ಮೆಟ್ಟಿಲು ಏರಿರುವುದರ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಹಣ ಬಂದಿದೆ ? ಎನ್​ಡಿಎ ಅವಧಿಯಲ್ಲಿ ಎನ್​ಡಿಆರ್​ಎಫ್ ಅನುದಾನ ಎಷ್ಟು ಬಂದಿದೆ ? ಎಂಬುದನ್ನು ರಾಜ್ಯ ಸರ್ಕಾರ ಬಹಿರಂಗ ಪಡಿಸಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net