

ಸಾಗರ: ನನಗೆ ನಿರೀಕ್ಷೆಗೆ ಮೀರಿ ಬೆಂಬಲ ದೊರೆಯುತ್ತಿದ್ದು, ಇದನ್ನು ಕಂಡು ಕೆಲವರು ನನ್ನ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂತಹವರಿಗೆ ಮತದಾರರೇ ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಹಾಕದಂತೆ ಕುತಂತ್ರ ಮಾಡಬಹುದು ಎನ್ನುವ ಕಾರಣಕ್ಕೆ ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿರುವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಭದ್ರಕಾಳಿ ಸಭಾಭವನದಲ್ಲಿ ರಾಷ್ಟ್ರಭಕ್ತರ ಬಳಗದಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿ ವಿಶ್ವನಾಯಕ. ದೇಶದ ಪ್ರತಿಯೊಬ್ಬ ಜನಸಾಮಾನ್ಯರೂ ಅವರನ್ನು ದೇವರಂತೆ ಪೂಜಿಸುತ್ತಿದ್ದಾರೆ. ನರೇಂದ್ರ ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದ ಕೋಟ್ಯಂತರ ಜನರು ಕನಸು ಕಾಣುತ್ತಿದ್ದಾರೆ. ಅಂತಹವರ ಫೋಟೋವನ್ನು ನಾನು ಬಳಕೆ ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ನಾನು ಲೋಕಸಭೆ ಚುನಾವಣೆ ಗೆದ್ದ ನಂತರ ಮತ್ತೆ ಮೋದಿ ಅವರ ಜತೆಗೆ ಹೋಗುತ್ತೇನೆ ಎಂದರು.
ಬಿಜೆಪಿ ಮತ್ತು ನನ್ನದು ತಾಯಿ-ಮಗುವಿನ ಸಂಬಂಧ. 40 ವರ್ಷದ ಬಾಂಧವ್ಯವನ್ನು ಬಿಟ್ಟು ಬಂದಿದ್ದಕ್ಕೆ ನನಗೆ ನೋವಾಗಿದೆ. ಆದರೆ ಮಹತ್ವದ ಕೆಲಸವೊಂದನ್ನು ಸಾಧಿಸಬೇಕಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಬಿಜೆಪಿ ಬಿಟ್ಟು ಸ್ಪರ್ಧೆ ಮಾಡಿದ್ದೇನೆ. ನನ್ನ ಸ್ಪರ್ಧೆ ದೇಶ ಮತ್ತು ರಾಜ್ಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಪಕ್ಷ, ಪರಿವಾರದ ಅನೇಕ ಹಿರಿಯರು ನನಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಈ ಚುನಾವಣೆ ಜನ ಬಲವೋ, ಹಣ ಬಲವೋ ಎನ್ನುವುದನ್ನು ಸಾಬೀತು ಮಾಡುತ್ತದೆ. ಹಣ ಮತ್ತು ಧರ್ಮದ ನಡುವೆ ನಡೆಯುತ್ತಿರುವ ಧರ್ಮ ಯುದ್ಧದಲ್ಲಿ ಅಂತಿಮವಾಗಿ ಧರ್ಮಕ್ಕೆ ಜಯ ಸಿಗುತ್ತದೆ ಎಂದರು.
ರಾಷ್ಟ್ರಭಕ್ತರ ಬಳಗದ ಸುರೇಶ್ ವಾಟಗೋಡು ಮಾತನಾಡಿ, ಶಿವಮೊಗ್ಗ ಜಿಲ್ಲೆಯಲ್ಲಿ ಕೆಲಸ ಮಾಡುವ ಪ್ರಮಾಣಿಕ ಕಾರ್ಯಕರ್ತರೇ ಬೇರೆ, ಅಧಿಕಾರ ಅನುಭವಿಸುವವರೆ ಬೇರೆ. ಇಡೀ ರಾಜ್ಯದಲ್ಲಿ ಪಕ್ಷ ಕಟ್ಟಿದರವನ್ನು ಮೂಲೆ ಗುಂಪು ಮಾಡಲಾಗುತ್ತಿದೆ. ಅವರೆಲ್ಲರ ಪ್ರತೀಕವಾಗಿ ನಮ್ಮ ಈಶ್ವರಪ್ಪ ಸ್ಪರ್ಧೆ ಮಾಡುತ್ತಿದ್ದಾರೆ. ನಮ್ಮಲ್ಲಿ ಶೋಷಿತರ ಪರವಾಗಿ ಗೀತೆಯನ್ನು ಹೇಳುತ್ತೇವೆ. ಆದರೆ ಭಾಗ್ಯೋದಯ ಮಾತ್ರ ಕೆಲವರಿಗೆ ಆಗುತ್ತದೆ. ನಾವೆಲ್ಲ ಸೇರಿ ಹಿಂದು ಹುಲಿ ಈಶ್ವರಪ್ಪ ಅವರನ್ನು ಗೆಲ್ಲಿಸಿ ಲೋಕಸಭೆಗೆ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸೋಣ ಎಂದು ಹೇಳಿದರು.
ರಾಷ್ಟ್ರಭಕ್ತ ಬಳಗದ ಅಧ್ಯಕ್ಷ ಪ್ರಕಾಶ್ ಕುಂಠೆ, ಪ್ರಮುಖರಾದ ಎಸ್.ಎಲ್.ಮಂಜುನಾಥ್, ಸತೀಶ್ ಗೌಡ ಅದರಂತೆ, ಕಸ್ತೂರಿ ಸಾಗರ್, ರಜನೀಶ್ ಹಕ್ರೆ, ಉಮೇಶ್ ಚೌಟಗಿ, ಅಣ್ಣಪ್ಪ, ಸವಿತಾ ಗೋಪಾಲ್, ನಾಗರಾಜ್ ಇತರರಿದ್ದರು.