

ಮೈಸೂರು: ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿ ಮುಖ ನೋಡಿ ಮತ ಕೊಡುವಂತೆ ಕೇಳುತ್ತಿದ್ದಾರೆ. ಆದರೆ ರಾಜ್ಯದ ಜನತೆ ಸಿದ್ದರಾಮಯ್ಯ ಮುಖ ನೋಡಿ ಮತ ಹಾಕಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.
ರಮ್ಮನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾಂಗ್ರೆಸ್ ಮತ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು, ದಲಿತರು, ಹಿಂದುಳಿದ ವರ್ಗಗಳ ಜನರು ಉಳಿಯಬೇಕಾದರೆ, ಸಮಾಜದಲ್ಲಿ ಸುಧಾರಣೆ ಬರಬೇಕಾದರೆ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಭೀಕರ ಬರಗಾಲದಲ್ಲೂ ಜನರು ನೆಮ್ಮದಿಯಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದಿನಕ್ಕೊಂದು ಗಲಾಟೆ ನಡೆಯುತ್ತಿತ್ತು. ಜನರು ನೆಮ್ಮದಿಯಾಗಿ ಇರಲಿಲ್ಲ. ಇದೆಲ್ಲವನ್ನು ಜನರು ಮರೆಯಬಾರದು ಎಂದು ಹೇಳಿದರು.
ದೇಶ, ಪ್ರಜಾಪ್ರಭುತ್ವ, ಬಡವರು, ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್‌ಗೆ ಮತಕೊಡಬೇಕು. ಅಂಬೇಡ್ಕರ್ ಅವರ ಸಂವಿಧಾನ ಉಳಿಯಬೇಕಾದರೆ ಬಿಜೆಪಿ ನಾಯಕರನ್ನು ಧಿಕ್ಕರಿಸಬೇಕು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ಹೇಳಿದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ತೆಗೆಯಲು ಬಹಳ ತಂತ್ರ ಮಾಡುತ್ತಿದ್ದಾರೆ. ಈ ಸರ್ಕಾರ ಉಳಿಸುವುದು ಮತದಾರರ ಕೈಯಲ್ಲಿದೆ. ಲಕ್ಷ್ಮಣ್‌ಗೆ ಮತ ಹಾಕಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಕೈ ಬಲಪಡಿಸಬೇಕು ಎಂದರು. ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಮತ್ತಿತರರಿದ್ದರು.