

ಕೋಲಾರ: ಆಮೇಲೆ ಕೊಡುತ್ತೇನೆ ಎಂದು ಬಸ್ಗಳಲ್ಲಿ ಕಂಡಕ್ಟರ್ಗಳು ಟಿಕೆಟ್ ಹಿಂದೆ ಚಿಲ್ಲರೆ ಮೊತ್ತ ಬರೆದುಕೊಡುವುದು ವಿಶೇಷವೇನಲ್ಲ. ಆದರೆ ಅಂಥದ್ದೊಂದು 'ಆಮೇಲೆ ಕೊಡುತ್ತೇನೆ' ಎಂಬ ಪ್ರಕರಣ ಕೊನೆಯಲ್ಲಿ ಇಬ್ಬರೂ ಕೊಟ್ಟು-ತಗೊಳೋವರೆಗೂ ಮುಂದುವರಿದಿದೆ. ಅರ್ಥಾತ್ ಬರೀ ಐದು ರೂಪಾಯಿ ಚಿಲ್ಲರೆ ವಿಷಯಕ್ಕೆ ಕಂಡಕ್ಟರ್ ಹಾಗೂ ಪ್ರಯಾಣಿಕರು ಬೀದಿಗಿಳಿದು ಬಡಿದಾಡಿದ್ದಾರೆ.
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಇಂಥದ್ದೊಂದು ಪ್ರಕರಣ ವರದಿಯಾಗಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದೆ. ಇಲ್ಲಿನ ಹಳೇ ಕೋರ್ಟ್ ಸರ್ಕಲ್ ಬಳಿ ನಡುರಸ್ತೆಯಲ್ಲೇ ಕಂಡಕ್ಟರ್ ಮತ್ತು ಪ್ರಯಾಣಿಕರೊಬ್ಬರ ನಡುವೆ ಮಾರಾಮಾರಿ ನಡೆದಿದೆ.
ಟಿಕೆಟ್ ನೀಡುವ ಸಂದರ್ಭದಲ್ಲಿ ಚಿಲ್ಲರೆ ಇರದ ಕಾರಣಕ್ಕೆ ಕಂಡಕ್ಟರ್ ಐದು ರೂಪಾಯಿ ಆಮೇಲೆ ಕೊಡುವುದಾಗಿ ಟಿಕೆಟ್ ಹಿಂದುಗಡೆ ಬರೆದುಕೊಟ್ಟಿದ್ದ. ಆದರೆ ಬಸ್ನಿಂದ ಇಳಿಯುವ ಸಂದರ್ಭದಲ್ಲೂ ಕಂಡಕ್ಟರ್ ಚಿಲ್ಲರೆ ಇಲ್ಲ ಎಂದಿದ್ದರಿಂದ ಪ್ರಯಾಣಿಕ ರೇಗಿದ್ದ. ಅದಕ್ಕೆ ಕಂಡಕ್ಟರ್ ಕೂಡ ಜೋರಾಗಿ ಮಾತನಾಡಿದ್ದರಿಂದ ಇಬ್ಬರ ನಡುವೆ ವಾಗ್ವಾದ ನಡೆದು ವಿಕೋಪಕ್ಕೆ ತೆರಳಿದ್ದು, ಬಳಿಕ ಅಕ್ಷರಶಃ ಬಡಿದಾಡಿಕೊಂಡಿದ್ದಾರೆ. ಸ್ಥಳೀಯರು ಮಧ್ಯಪ್ರವೇಶಿಸಿ ಜಗಳ ಬಿಡಿಸಿದ್ದಾರೆ. ಆದರೆ ಈ ಮಧ್ಯೆ ಕೆಲವರು ಇದನ್ನು ವಿಡಿಯೋ ಮಾಡಿಕೊಂಡಿದ್ದು, ಬಡಿದಾಟದ ದೃಶ್ಯ ವೈರಲ್ ಆಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.facebook.com/VVani4U/videos/2893772047556929