ಕಿಂಗ್‌ಫಿಶರ್ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆ : 25 ಕೋಟಿ ರೂ.ಮೌಲ್ಯದ ಬಿಯರ್ ವಶ

kingfisher beer
Published on

ಮೈಸೂರು: ನಂಜನಗೂಡಿನ ಯುನೈಟೆಡ್ ಬ್ರಿವರಿಸ್ ಕಂಪನಿ ತಯಾರಿಸಿದ್ದ ಕಿಂಗ್ ಫಿಶರ್ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿರುವ ಹಿನ್ನೆಲೆಯಲ್ಲಿ 25 ಕೋಟಿ ರೂ.ಮೌಲ್ಯದ 78,678 ಬಾಕ್ಸ್ ಬಿಯರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಎ.ರವಿಶಂಕರ್ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಿಂಗ್ ಫಿಷರ್ ಸ್ಟ್ರಾಂಗ್ ಹಾಗೂ ಕಿಂಗ್ ಫಿಷರ್ ಅಲ್ಟ್ರಾ ಲ್ಯಾಗರ್ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಸೆಡಿಮೆಂಟ್ ಅಂಶ ಇದ್ದರೆ ಅಂತಹ ಬಿಯರ್‌ಅನ್ನು ಮನುಷ್ಯರು ಸೇವಿಸಲು ಯೋಗ್ಯವಾಗಿರುವುದಿಲ್ಲ. 7 ಇ ಮತ್ತು 7ಚ ನಮೂನೆಯಲ್ಲಿ ಜುಲೈ 15 ರಂದು ಬಾಟಿಲಿಂಗ್ ಆದ ಬಿಯರ್‌ನಲ್ಲಿ ಸೆಡಿಮೆಂಟ್ ಅಂಶ ಕಂಡುಬಂದಿತ್ತು. ಬಿಯರ್ ಸ್ಯಾಂಪಲ್‌ಅನ್ನು ಕೆಮಿಕಲ್ ಲ್ಯಾಬ್‌ಗೆ ಕಳುಹಿಸಿದ ಸಂದರ್ಭ ಸೆಡಿಮೆಂಟ್ ಅಂಶ ಪತ್ತೆಯಾಗಿತ್ತು. ಆ.2 ರಂದು ಬಂದ ಲ್ಯಾಬ್ ವರದಿ ಆಧರಿಸಿ ತಕ್ಷಣವೇ ಸೆಡಿಮೆಂಟ್ ಅಂಶವಿರುವ ಬಿಯರ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಯಿತು ಎಂದು ತಿಳಿಸಿದರು.

ಸೆಡಿಮೆಂಟ್ ಅಂಶವಿರುವ ಎಲ್ಲ ಬಿಯರ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಕೆಲವು ಬಾಕ್ಸ್‌ಗಳು ರಿಟೈಲ್ ಶಾಪ್‌ಗೆ ಪೂರೈಕೆಯಾಗಿತ್ತು. ಅಲ್ಲೂ ಕೂಡ ಮಾರಾಟವಾಗದಂತೆ ತಡೆ ಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರು ಮಾಡದ ಕಾರಣ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net