

ಸೇಡಂ: ಬಹುತೇಕ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮನಸ್ಸಿನ ಕೆಲಸ ಮಾಡುವ ಬದಲು ಅಸಡ್ಡೆ ಭಾವನೆ ಹೊಂದಿದಾರೆ. ಅಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಂವರ್‌ಸಿಂಗ್ ಮೀನಾ ಎಚ್ಚರಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಮಾತನಾಡಿದರು.
ಗ್ರಾಪಂಗಳಲ್ಲಿ ಆಗಬೇಕಿದ್ದ ಯಾವುದೇ ಅಭಿವೃದ್ಧಿ ಕೆಲಸ ನಿಮ್ಮಿಂದ ಮಾಡೋದಕ್ಕೆ ಆಗುತ್ತಿಲ್ಲ ಎಂದಾದರೆ ಸರ್ಕಾರ ನಿಮಗೆ ಸಂಬಳ ಯಾವ ಕಾರಣಕ್ಕೆ ಕೊಡಬೇಕು? ಬಹುತೇಕ ಗ್ರಾಪಂಗಳಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿಲ್ಲ, ನರೇಗಾ ಕೆಲಸಗಳು ನಡೆಯುತ್ತಿಲ್ಲ, ಕೂಸಿನ ಮನೆ ನಿರ್ಮಾಣ ಮಾಡಿಲ್ಲ, ಗ್ರಂಥಾಲಯಕ್ಕೆ ಮಕ್ಕಳ ನೋಂದಣಿ ಮಾಡಿಸುತ್ತಿಲ್ಲ, ಆನ್‌ಲೈನ್ ಹಾಜರಾತಿ ಮಾಡಲು ಆಗುತ್ತಿಲ್ಲ, ಇವೆಲ್ಲವುಗಳ ಯೋಜನೆ ತಯಾರಿಸಲು ನಿಮ್ಮಿಂದ ಆಗಲ್ಲ ಅಂತಾದರೆ ಯಾವ ಪುರುಷಾರ್ಥಕ್ಕಾಗಿ ನೀವು ಸರ್ಕಾರಿ ಸೇವೆಯಲ್ಲಿ ಇದ್ದೀರಿ. ಏನಾದರೂ ಕೇಳಿದರೆ ಕುಂಟು ನೆಪ ಹೇಳುವುದು ರೂಢಿ ಮಾಡಿಕೊಂಡಿದ್ದೀರಿ. ನಿಮಗೆ ಬೇಕಾದ ಬಿಲ್ ಮಾಡಿ ಹಣ ಲೂಟಿ ಮಾಡೋಕೆ ಕೆಲಸ ಮಾಡ್ತಿರಾ? ಎಂದು ತರಾಟೆಗೆ ತೆಗೆದುಕೊಂಡರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಧಿಕಾರಿ ಚನ್ನಪ್ಪ ರಾಯಣ್ಣವಾರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಿದ್ದರು. ಇದಕ್ಕು ಮೊದಲು ತಾಲೂಕಿನ ಎಸ್.ಎನ್.ತಾಂಡಕ್ಕೆ ಭೇಟಿ ನೀಡಿದ ಅವರು ನರೇಗಾ ಕೆಲಸವರನ್ನು ಪರಿಶೀಲಿಸಿದರು.
ಇ-ಸ್ವತ್ತು ಗಣಕೀಕೃತ ಮಾಡುವುದು. ಪಂಚತಂತ್ರದಲ್ಲಿ ಅಳವಡಿಸುವ ಕೆಲಸದಲ್ಲಿ ತಾಲೂಕು ಕೊನೆಯ ಸ್ಥಾನದಲ್ಲಿದೆ. ಗ್ರಾಮೀಣದ ಅಭಿವೃದ್ದಿಗೆ ಅಗತ್ಯವಾದ ನೀಲ ನಕ್ಷೆ ತಯಾರಿಸಿಕೊಂಡು ನಿಮಗೆ ನೀಡಲಾದ ಎಲ್ಲ ಕೆಲಸಗಳು ಒಂದು ವಾರದಲ್ಲಿ ಕನಿಷ್ಠ ಶೇ.೫೦ರಷ್ಟು ಮುಗಿಸಬೇಕು.
| ಭನ್ವರ್‌ಸಿಂಗ್ ಮೀನಾ, ಜಿಪಂ ಸಿಇಒ