ಕಾರ್ಮಿಕರ ಊಟದಲ್ಲಿ ಹಲ್ಲಿ ಪತ್ತೆ

25-SDMMAY-01(01)
ಕಾರ್ಮಿಕರಿಗೆ ನೀಡಿದ ಆಹಾರದಲ್ಲಿ ಹಲ್ಲಿ ಬಿದ್ದಿರುವುದು.
Published on

ಸೇಡಂ: ವಾಸವದತ್ತಾ ಸಿಮೆಂಟ್ ಕಂಪನಿಯಲ್ಲಿನ ಕಾರ್ಮಿಕರ ಕ್ಯಾಂಟಿನ್‌ನಲ್ಲಿ ನೀಡುವ ಮಧ್ಯಾಹ್ನದ ಊಟದಲ್ಲಿ ಹಲ್ಲಿ ಕಾಣಿಸಿಕೊಂಡಿದ್ದು, ಊಟ ಸವಿದ ಎಲ್ಲರೂ ಒಂದು ಕ್ಷಣ ಹೌಹಾರಿದ ಪ್ರಸಂಗ ಶನಿವಾರ ನಡೆಯಿತು.

ಮುಧೋಳದ ಶಿವಶರಣಯ್ಯ ಸ್ವಾಮಿ ಎಂಬ ಕಾರ್ಮಿಕ ತೀವ್ರ ಅಸ್ವಸ್ಥಗೊಂಡಿದ್ದು, ಕಂಪನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹತ್ತಾರು ವರ್ಷಗಳಿಂದ ಕಾರ್ಖಾನೆಯಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರಿಗೆ ಉಪಾಹಾರ, ಊಟ ನೀಡಲಾಗುತ್ತಿದೆ. ಎಂದಿನಂತೆ ಮಧ್ಯಾಹ್ನ ಊಟಕ್ಕಾಗಿ ಬಂದಿದ್ದ ಕಾರ್ಮಿಕರು ಟೋಕನ್ ನೀಡಿ ಆಹಾರ ಪಡೆದಿದ್ದಾರೆ. ಕಾರ್ಮಿಕನೊಬ್ಬನ ಪ್ಲೇಟ್‌ನಲ್ಲಿ ಸತ್ತಿರುವ ಹಲ್ಲಿ ಕಾಣಿಸಿದೆ. ಇದರಿಂದ ದಂಗಾದ ಕಾರ್ಮಿಕರು ಇನ್ನುಳಿದವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಊಟ ಮಾಡಿದ ಬಹುತೇಕ ಕಾರ್ಮಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕಂಪನಿ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡಿದ್ದಾರೆ. ೨-೩ ಕಾರ್ಮಿಕರು ಹೊರತು ಪಡಿಸಿ ಯಾರೊಬ್ಬರಲ್ಲೂ ಸಮಸ್ಯೆ ಕಾಣಿಸಿಲ್ಲ. ಆರೋಗ್ಯ ಸಮಸ್ಯೆ ಕಾಣಿಸಿಕೊಂಡವರಿಗೂ ಸೂಕ್ತ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಜಯ ಪಾಟೀಲ್ ಕ್ಯಾಂಟಿನ್ ಹಾಗೂ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು, ಸುಮಾರು ೨೦೦ ಕಾರ್ಮಿಕರು ಊಟ ಮಾಡಿರಬಹುದು ಎಂದು ಅಂದಾಜಿಸಲಾಗಿದ್ದು, ಊಟ ಮಾಡಿದವರ ಪೈಕಿ ವಾಂತಿ ಸೇರಿ ಇನ್ನಿತರ ಲಕ್ಷಣ ಕಾಣಿಸಿಕೊಂಡವರಿಗೆ ಚಿಕಿತ್ಸೆ ಪಡೆಯಲು ಮನವಿ ಮಾಡಲಾಗಿದೆ. ಅಲ್ಲದೆ ಎಲ್ಲರಿಗೂ ಔಷಧಿಗಳನ್ನು ನೀಡಲಾಗಿದೆ ಎಂದು ಹೇಳಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿ ಶಿವಯೋಗಿ ಸಕ್ಪಾಲ್, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿ ಸುಧಾ ವಿಭೂತಿ ಇತರರಿದ್ದರು.

ನಿಮಗಿಷ್ಟ ಬಂದಂತೆ ವರ್ತಿಸಿದ್ರೆ ನೆಟ್ಟಗಿರಲ್ಲ: ವಾಸವದತ್ತಾ ಕ್ಯಾಂಟಿನ್ ಸಿಬ್ಬಂದಿಯನ್ನು ಟಿಎಚ್‌ಒ ಡಾ.ಸಂಜಯ ಪಾಟೀಲ್ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಮಧ್ಯಾಹ್ನ ಕಾರ್ಮಿಕರಿಗೆ ನೀಡಿದ ಊಟ ಪರಿಶೀಲನೆ ನಡೆಸಲು ಅಡುಗೆ ಕೋಣೆಗೆ ಹೋದಾಗ ಹಲ್ಲಿ ಬಿದ್ದ ಸಾಂಬಾರ್ ಎಲ್ಲಿದೆ ಎಂದು ಪ್ರಶ್ನಿಸಿದರು. ಕಾರ್ಮಿಕರಿಂದ ದೂರು ಬರುತ್ತಿದ್ದಂತೆ ಎಲ್ಲ ಸಾಂಬಾರ್ ಚಲ್ಲಲಾಗಿದೆ ಎಂದು ಕ್ಯಾಂಟಿನ್ ಗುತ್ತಿಗೆದಾರರು ಹಾರಿಕೆ ಉತ್ತರ ನೀಡಿದರು. ಇದರಿಂದ ಕೋಪಗೊಂಡ ಟಿಎಚ್‌ಒ, ನಿಮ್ಮಿಷ್ಟದಂತೆ ವರ್ತಿಸಿದರೆ ನೆಟ್ಟಗಿರಲ್ಲ. ಆಹಾರ ಸುರಕ್ಷತಾ ಅಧಿಕಾರಿಗಳು ಬಂದು ಕೇಳಿದರೆ ಏನು ಕೊಡುತ್ತೀರಿ ? ಗುಣಮಟ್ಟದ ಪರಿಶೀಲನೆಗೆ ಯಾವ ಆಹಾರ ಕೊಡುವಿರಿ ? ಹೀಗಾದರೆ ನಿಮ್ಮ ಮೇಲೆಯೇ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಮಿಕರಿಗೆ ಆಹಾರ ತಯಾರಿಸುವ ಅಡುಗೆ ಮನೆ ಗಬ್ಬೆದ್ದು ನಾರುತ್ತಿದೆ. ನಲ್ಲಿ ನೀರನ್ನೇ ಆಹಾರ ತಯಾರಿಸಲು ಬಳಸುತ್ತಾರೆ. ಅಡುಗೆ ಕೋಣೆ ಸ್ವಚ್ಛಗೊಳಿಸುವುದಿಲ್ಲ. ಇದರಿಂದಾಗಿ ಹುಳು, ಹಲ್ಲಿಗಳು ಊಟದಲ್ಲಿ ಬೀಳುತ್ತವೆ. ಒಟ್ಟಿನಲ್ಲಿ ಕಾರ್ಮಿಕರೆಂದರೆ ಕಾಳಜಿಯೂ ಇಲ್ಲದಂತಾಗಿದೆ. ಕ್ಯಾಂಟಿನ್ ಗುತ್ತಿಗೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು.
| ಹೆಸರು ಹೇಳಲಿಚ್ಚಿಸಿದ ಕಾರ್ಮಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net