ಶಾಲೆಗಳಿಂದ ದೇಶದ ಭವಿಷ್ಯ ಭದ್ರ, ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ

19 Nela Ph 02 udgatane
Published on

ನೆಲಮಂಗಲ: ದೇಶದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಶಾಲೆಗಳು ಸಹಕಾರಿ ಎಂದು ತುಮಕೂರು ಶ್ರೀ ಸಿದ್ಧಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಸೊಂಡೇಕೊಪ್ಪ ಮುಖ್ಯರಸ್ತೆಯ ಅಂಬೇಡ್ಕರ್‌ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಗಣಪತಿ ದೇವಾಲಯ, ಶಾಲಾ ಕಾಂಪೌಂಡ್, ಧ್ವಜಸ್ತಂಭ, ದುರಸ್ತಿಗೊಳಿಸಿದ ಶಾಲಾ ಕೊಠಡಿಗಳು ಹಾಗೂ ಅಂಗನವಾಡಿ ಕಟ್ಟಡ, ಶೌಚಗೃಹ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಶಾಲೆ ಶಿಕ್ಷಕ ನಾಗರಾಜು ಸ್ವತಃ 8 ಲಕ್ಷ ರೂ. ವೆಚ್ಚ ಮಾಡಿ ಶಾಲೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತಿರುವ ಪಾಲಕರ ಶ್ರಮಕ್ಕೆ ಬೆಲೆಕಟ್ಟಲಾಗದು. ಶಿಕ್ಷಕರು ಮಕ್ಕಳ ಜತೆಗೆ ಪಾಲಕರಿಗೂ ಶೈಕ್ಷಣಿಕ ಜೀವನದ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸರ್ಕಾರ ಗುಡಿಸಲುಮುಕ್ತ ನಗರವಾಗಿ ನಿರ್ಮಾಣ ಮಾಡಬೇಕಿದೆ. ಸಚಿವರು, ಶಾಸಕರು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಗುಡಿಸಲು ವಾಸಿಗಳಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಮಾತನಾಡಿ, ಟೆಂಟ್ ಶಾಲೆಯಿಂದ ಪ್ರಾರಂಭವಾದ ಈ ಶಾಲೆ ಇಂದು ಮಾದರಿ ಶಾಲೆಯಾಗಿ ಪರಿವರ್ತನೆಯಾಗಿರುವುದು ಸಂತಸದ ಸಂಗತಿ. ಸರ್ಕಾರಿ ಶಾಲೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

10 ತಿಂಗಳಿಂದ ಮಕ್ಕಳು ತರಗತಿ ಇಲ್ಲದೆ ಬೇಸತ್ತಿದ್ದಾರೆ. 6ರಿಂದ 9ನೇ ತರಗತಿಯ ಮಕ್ಕಳಿಗೆ ವಿದ್ಯಾಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶೇ.80 ಮಕ್ಕಳು ಬರುತ್ತಿದ್ದಾರೆ. ಕೋವಿಡ್-19 ಹಿನ್ನಲೆ ಶಾಲೆಗಳಿಗೆ ಮಕ್ಕಳು ಹಾಜರಾಗುವುದು ಕಷ್ಟಕರ ಸಂಗತಿ. ಅದ್ದರಿಂದ ಶಾಲೆಯ ಮಕ್ಕಳು ಇರುವ ಜಾಗಕ್ಕೆ ಹೋಗಿ ಪಾಠ ಮಾಡುವುದು ವಿದ್ಯಾಗಮ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.

ಬಸ್ ವ್ಯವಸ್ಥೆ: ಗ್ರಾಮೀಣ ಭಾಗದಿಂದ ನಗರ ಪ್ರದೇಶದ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯದ ಕೊರತೆ ಇದೆ. ಈಗಾಗಲೇ ಸಾರಿಗೆ ಇಲಾಖೆಯ ಅಧಿಕಾರಿಗಳಿಂದಿಗೆ ಚರ್ಚಿಸಲಾಗಿದೆ. ಅಗತ್ಯ ನೋಡಿಕೊಂಡು ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವರು ಹೇಳಿದರು.

ಶಾಲೆ ದತ್ತು ಸ್ವೀಕಾರ: ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಹೇಳಿರುವಂತೆ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು ಶಾಲೆ ಅಭಿವೃದ್ಧಿಗೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಶಾಸಕ ಡಾ. ಕೆ. ಶ್ರೀನಿವಾಸ್‌ಮೂರ್ತಿ ತಿಳಿಸಿದರು.

ಬಿಎಂಟಿಸಿ ನಿರ್ದೇಶಕ ಕೆ.ಪಿ. ಬೃಂಗೇಶ್, ತಹಸೀಲ್ದಾರ್ ಕೆ. ಮಂಜುನಾಥ್, ನಗರಸಭೆ ಪೌರಾಯುಕ್ತ ಮಂಜುನಾಥ್ ಸ್ವಾಮಿ. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ. ರಮೇಶ್, ಕ್ಷೇತ್ರ ಸಮಸ್ವಯಾಧಿಕಾರಿ ನರಸಿಂಹಯ್ಯ, ಎಸ್‌ಸಿ/ಎಸ್‌ಟಿ ನೌಕರರ ಸಂಘ ಗ್ರಾಮಾಂತರ ಜಿಲ್ಲಾಧ್ಯಕ್ಷ ರಾಮಾಂಜಿನಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಟಿ. ವಾಸುದೇವಮೂರ್ತಿ, ಗ್ರಾಪಂ ಸದಸ್ಯ ಹನುಮಂತರಾಜು, ಶಿಕ್ಷಕ ಎನ್. ನಾಗರಾಜು, ಎಲ್.ವಿ. ಮೋಹನ್‌ಕುಮಾರಿ, ಮುರುಳಿ, ಕೆ.ಎನ್. ವನರಾಜು ಮತ್ತಿತತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net