

ಬೆಂಗಳೂರು: ಕನ್ನಡಿಗರ ಮಕ್ಕಳಿಗೆ ಉದ್ಯೋಗದ ಭರವಸೆ ಭದ್ರಪಡಿಸುವುದು ಸರ್ಕಾರದ ಜವಾಬ್ದಾರಿ ಎಂದು 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಹಾಗೂ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದ್ದಾರೆ.
ಮಾತೃಭಾಷೆಯಲ್ಲಿ ಶಿಕ್ಷಣ ಕೊಡಿಸಿದರೆ ತಮ್ಮ ಮಕ್ಕಳಿಗೆ ಭವಿಷ್ಯ ಇಲ್ಲ ಎಂಬ ಆತಂಕದಿಂದಲೇ ಪಾಲಕರಿಗೆ ಇಂಗ್ಲಿಷ್ ಬಗ್ಗೆ ವ್ಯಾಮೋಹ ಜಾಸ್ತಿಯಾಗಿದೆ. ಇಂಗ್ಲಿಷ್ ವ್ಯಾಮೋಹ ಹೋಗಲಾಡಿಸುವ ಕೆಲಸವನ್ನು ಮೊದಲು ಸರ್ಕಾರ ಮಾಡಬೇಕು.ಸುಪ್ರೀಂಕೋರ್ಟ್, ಪ್ರಸಿದ್ಧ ಶಿಕ್ಷಣ ತಂತ್ರಜ್ಞರು,ಮಾತೃಭಾಷೆಯಲ್ಲೇ ಶಿಕ್ಷಣ ನೀಡುವಂತಾಗಬೇಕೆಂದು ಹೇಳಿದ್ದಾರೆ. ಹಾಗಾಗಿ, ಮಾತೃಭಾಷೆ ಶಿಕ್ಷಣ ನೀಡುವ ನಿಯಮ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇಲ್ಲದಂತಾಗಿದೆ. ಆಯಾ ರಾಜ್ಯದಲ್ಲಿ ಮಾತೃಭಾಷೆಗೆ ಆದ್ಯತೆ ನೀಡಬೇಕೆಂದು ಸಂವಿಧಾನದಲ್ಲೂ ಉಲ್ಲೇಖಿಸಲಾಗಿದೆ. ಹಾಗಾಗಿ, ಮಾತೃಭಾಷೆಗೆ ಭದ್ರ ಅಡಿಪಾಯ ಹಾಕುವ ಕೆಲಸವಾಗಬೇಕಿದೆ. ಮಾತೃ ಭಾಷೆಯನ್ನು ಪರಿಣಾಮಕಾರಿ ಬೆಳೆಸುವುದು ಸರ್ಕಾರದ ಆದ ಕರ್ತವ್ಯ ಎಂದು ಗೊ.ರು.ಚನ್ನಬಸಪ್ಪ ಸಲಹೆ ನೀಡಿದರು.
ಅಲ್ಲದೆ, ಕನ್ನಡಿಗರ ಮಕ್ಕಳಿಗೆ ಉದ್ಯೋಗ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ತಮ್ಮ ಭವಿಷ್ಯ ಅತಂತ್ರವಾದಗ ಯುವಜನರು ಸಹಜವಾಗಿ ಅಸಮಾಧಾನಗೊಳ್ಳುತ್ತಾರೆ. ಇದರಿಂದಾಗಿ ಶಾಂತಿಭಗ್ನವಾಗಲಿದೆ. ಯುವಜನತೆ ಭವಿಷ್ಯವನ್ನು ಭದ್ರಪಡಿಸುವುದಕ್ಕೆ ಸರ್ಕಾರ ಮುಂದಾಗಬೇಕು. ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾದ ಸರ್ಕಾರ ಕನ್ನಡಿಗರ ಕ್ಷೇಮವನ್ನು ಕೇಳುವಂತಾಗಬೇಕು ಎಂದು ಸಲಹೆ ನೀಡಿದರು.
ಅನ್ಯಭಾಷೆಗಳಿಂದ ಕನ್ನಡ ಕಲಬೆರಕೆ: ಕನ್ನಡ ನಶಿಸುತ್ತಿಲ್ಲ. ಜೀವಂತವಾಗಿದೆ. ಆದರೆ, ಅನ್ಯಭಾಷೆಗಳಿಂದ ಕನ್ನಡ ಕಲಬೆರಕೆವಾಗುತ್ತಿದೆ. ಕನ್ನಡದ ಮೂಲ ಸೊಗಡು ಕಳೆದು ಹೋಗುತ್ತಿದೆ. ಆದ್ದರಿಂದ, ನಮ್ಮ ಮಾತೃ ಭಾಷೆ ಕಣ್ಮರೆಯಾಗುವ ಆತಂಕದಲ್ಲಿ ಇದ್ದೇವೆ. ಯಾವುದೇ ಕಾರಣಕ್ಕೂ ಕನ್ನಡದ ಮೂಲ ಸೊಗಡು ಹಾಳಾಗಬಾರದು. ಈ ಬಗ್ಗೆ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಮಕ್ಕಳಲ್ಲಿ ಮಾತೃಭಾಷೆ ಬಗ್ಗೆ ಅಭಿಮಾನ ಮೂಡಿಸುವ ಕೆಲಸವಾಗಬೇಕು. ಮೊದಲು ಶಾಲಾ-ಕಾಲೇಜುಗಳಲ್ಲಿ ಕನ್ನಡದ ಬೇರು ನೆಡುವ ಕೆಲಸವಾಗಬೇಕು. ಸಾಹಿತ್ಯ, ಸಂಸತಿ, ನೆಲದ ಸೊಗಡು ಕುರಿತು ಮಕ್ಕಳಲ್ಲಿ ಕಲಿಸುವ ಕಾರ್ಯಗತವಾಗಬೇಕು ಎಂದು ಗೊ.ರು.ಚನ್ನಬಸಪ್ಪ ವಿವರಿಸಿದರು.
ಯಾವುದೇ ಸ್ಥಾನಮಾನಕ್ಕೆ ಅಪೇಕ್ಷೆಪಟ್ಟವನಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಧ್ಯಕ್ಷ,ಅಧ್ಯಕ್ಷನ್ನಾಗಿ ಕೆಲಸ ಮಾಡಿದ್ದೇನೆ.ಸಿಕ್ಕ ಅವಕಾಶವನ್ನು ಬಳಸಿಕೊಂಡು ಕನ್ನಡ ಕಟ್ಟುವ ಕೆಲಸ ಮಾಡಿರುವ ತೃಪ್ತಿ ನನಗಿದೆ. ನನ್ನ ಜೀವಮಾನದಲ್ಲಿ ಯಾವುದೇ ಸ್ಥಾನಮಾನಕ್ಕೆ ಅಪೇಕ್ಷೆಪಟ್ಟವನಲ್ಲ. ಸಮ್ಮೇಳನದಲ್ಲಿ ಅಧ್ಯಕ್ಷನ್ನಾಗಿ ಆಯ್ಕೆಯಾಗಿರುವುದು ನನಗೆ ಅನಿರೀಕ್ಷಿತ. ಸಮ್ಮೇಳನಕ್ಕೆ ತನ್ನದೆ ಘನತೆ, ಪ್ರಾವಿತ್ರ್ಯತೆ ಇರುತ್ತದೆ. ಸಾಹಿತಿಗಳು, ವಿದ್ಯಾವಂತರು, ಸಾಹಿತ್ಯಾಸಕ್ತರು ಸೇರಿ ಸಾವಿರಾರು ಮಂದಿ ಸೇರುತ್ತಾರೆ. ಸಡಗರ, ಸಂಭ್ರಮ ಸೇರಿ ಕನ್ನಡದ ಅಸ್ಮಿತೆ ಎತ್ತುಹಿಡಿಯುವ ಕೆಲಸವಾಗುತ್ತದೆ ಎಂದು ಚನ್ನಬಸಪ್ಪ ತಿಳಿಸಿದರು.
ಶುದ್ಧ ಕನ್ನಡಕ್ಕೆ ಮಂಡ್ಯ ಹೆಸರುವಾಸಿ: ಈ ಬಾರಿ ಮಂಡ್ಯದಲ್ಲಿ ಸಮ್ಮೇಳನ ಆಯೋಜಿಸಿರುವುದು ಸಂತಸದ ಸಂಗತಿ. ಶುದ್ಧ ಕನ್ನಡಕ್ಕೆ ಮಂಡ್ಯ ಹೆಸರುವಾಸಿ. ಆ ಜಿಲ್ಲೆಯಲ್ಲಿ ಭಾಷೆಯ ಮೂಲ ಸೊಗಡು ಉಳಿದುಕೊಂಡಿದೆ ಮತ್ತು ಕನ್ನಡ ಕಲಬೆರಕೆಯಾಗಿಲ್ಲ. ಹಾಗಾಗಿ, ಮಂಡ್ಯದಲ್ಲಿ ಸಾಹಿತ್ಯ ಸಮ್ಮೇಳನದಿಂದ ಕನ್ನಡದ ನತೆ, ಗೌರವ ಇನ್ನಷ್ಟು ಹೆಚ್ಚಾಗಲಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದ ವೇಳೆ 1994ರಲ್ಲಿ ಮಂಡ್ಯದಲ್ಲಿ "ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ' ನಡೆಸಿದ್ದೆ. ಅಲ್ಲಿನ ಜನರ ಅಭೂತಪೂರ್ವ ಸಹಕಾರದಿಂದ ಸಮ್ಮೇಳನವು ಯಶಸ್ವಿಯಾಗಿ ಜರುಗಿತ್ತು. ಜನರ ಹಣದಿಂದ "ಸಾಹಿತ್ಯಭವನ' ಕಟ್ಟಿಸಿದ್ದವು. ಇದೀಗ ಮಂಡ್ಯದಲ್ಲೇ ನಡೆಯುವ ಸಮ್ಮೇಳನಕ್ಕೆ ನಾನು ಅಧ್ಯಕ್ಷನಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದು ಗೊ.ರು.ಚನ್ನಬಸಪ್ಪ ಹರ್ಷವ್ಯಕ್ತಪಡಿಸಿದರು.
ಕನ್ನಡದಲ್ಲಿ ರಾಜಕೀಯ ನುಸುಳಿಲ್ಲ.ಆದರೆ, ಬೆರವಣಿಗೆ, ಸಾಹಿತಿ,ವಾದ-ವಿವಾದಗಳಲ್ಲಿ ರಾಜಕೀಯ ಸೇರಿದೆ. ಎಲ್ಲ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ನಮ್ಮ ಬದುಕಿನ ಆಯಾಮದಲ್ಲೂ ರಾಜಕೀಯ ನುಗ್ಗಿದೆ. ರಾಜಕೀಯ ಶುದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಮುಂದಾಗಬೇಕು. ಸಮಕಾಲೀನ ಸಮಸ್ಯೆ ಅರ್ಥ ಮಾಡಿಕೊಂಡಿರುವ ಸಾಹಿತಿಗಳು,ಪರಿಹಾರ ನೀಡುವ ಕೆಲಸ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ. ಸಾಹಿತ್ಯ, ಸಮ್ಮೇಳನ, ಸಂಸತಿ ಅಭಿವೃದ್ಧಿಗೆ ಸರ್ಕಾರ ನೀಡುವ ಅನುದಾನ ಎಂದಿಗೂ ವ್ಯರ್ಥವಾಗಲ್ಲ. ಈ ಮೂಲಕ ನಾಡಿನ ನಿರ್ಮಾಣಕ್ಕೆ ಸಜ್ಜುಗೊಳಿಸಲು ಸಹಾಯವಾಗಲಿದೆ.
| ಗೊ.ರು.ಚನ್ನಬಸಪ್ಪ. ಹಿರಿಯ ಸಾಹಿತಿ.