

ಟಿ. ಶ್ರೀನಿವಾಸ್ ಹೊನ್ನಾಳಿ
ಕೇವಲ ಒಂದು ಜಾತಿಗೆ ಸೀಮಿತವಾಗದೆ ಇಡೀ ಹಿಂದು ಸಮಾಜದ ಸದ್ಭಕ್ತರು ಬಂದು ಹೋಗುವ ಜಾತ್ಯತೀತ ಶ್ರೀಮಠ ಎಂದರೆ ಅದು ಹೊನ್ನಾಳಿಯ ಹಿರೇಕಲ್ಮಠ.
ನ್ಯಾಯಾಲಯಗಳಲ್ಲೂ ಇತ್ಯರ್ಥವಾಗದ ನೂರಾರು ಪ್ರಕರಣಗಳು ಶ್ರೀಮಠದ ಶ್ರೀಗಳ ಸಮ್ಮುಖದಲ್ಲಿ ಇತ್ಯರ್ಥವಾಗಿವೆ. ಈಗಲೂ ಯಾವುದೇ ವಿಚಾರದಲ್ಲಿ ವಾಗ್ವಾದ ನಡೆದಾಗ, ‘ಚನ್ನಪ್ಪಸ್ವಾಮಿ ಮಠದಲ್ಲಿ ಪ್ರಮಾಣ ಮಾಡು’ ಎಂಬುವಷ್ಟರ ಮಟ್ಟಿಗೆ ಇಲ್ಲಿ ಸತ್ಯಕ್ಕೆ ಬೆಲೆ ಇದೆ.
ವಿಶೇಷವಾಗಿ ಶ್ರಾವಣ ಮಾಸದಲ್ಲಿ ರಾಜ್ಯದೆಲ್ಲೆಡೆಯಿಂದ ಕಷ್ಟ ಪರಿಹರಿಸಿಕೊಳ್ಳಲು ಭಕ್ತರು ಶ್ರೀಮಠಕ್ಕೆ ಆಗಮಿಸುತ್ತಾರೆ. ಮಠದಲ್ಲಿ ಶ್ರಾವಣ ಮಾಸದಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮ ಜರುಗುತ್ತವೆ. ಪ್ರತಿ ಸೋಮವಾರ ಮಹಾರುದ್ರಾಭಿಷೇಕ, ವಿಶೇಷ ಪೂಜೆ ಪುನಸ್ಕಾರ ನಡೆಯುತ್ತವೆ.
ಲಿಂ.ಶ್ರೀ ಚನ್ನಪ್ಪಸ್ವಾಮಿ, ಜಡೆಶಂಕರಸ್ವಾಮಿ, ಗುರುಬಸವಸ್ವಾಮಿ ಕರ್ತೃಗದ್ದಿಗೆಗಳಿಗೆ ಹಾಗೂ ಕ್ಷೇತ್ರನಾಥ ಶ್ರೀ ಭೂತೇಶ್ವರ, ಚೌಡೇಶ್ವರಿ ದೇವಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಸಾವಿರಾರು ಭಕ್ತರಿಗೆ ಅನ್ನದಾಸೋಹ ನಡೆಯುತ್ತದೆ.
ಚನ್ನಪ್ಪಸ್ವಾಮಿ ರಥೋತ್ಸವ: ಶ್ರೀ ಮಠದ ಚನ್ನಪ್ಪಸ್ವಾಮಿ ರಥೋತ್ಸವ ಅದ್ದೂರಿಯಾಗಿ ನೆರವೇರುವುದು ಇಲ್ಲಿನ ವಿಶೇಷ. ರಾಜ್ಯಾದ್ಯಂತ ಭಕ್ತರು ಆಗಮಿಸಿ ರಥೋತ್ಸವ ನೋಡಿ ಕಣ್ತುಂಬಿಕೊಳ್ಳುತ್ತಾರೆ. ಜತೆಗೆ ಜಂಗಮ ವಟುಗಳಿಗೆ ದೀಕ್ಷೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳ ಜತೆ ಅಂದು ಶ್ರೀ ಮಠದ ಆವರಣದಲ್ಲಿ ಕೆಂಡಾರ್ಚನೆ ನಡೆಯುತ್ತದೆ.
ಶ್ರೀ ಮಠದಲ್ಲಿ ಸಾಮಾಜಿಕ ಕಳಕಳಿ: ಮಠ ಸಾಮಾಜಿಕ ಕಳಕಳಿಗೆ ಹೆಸರಾಗಿದೆ. ಪ್ರತಿವರ್ಷ ಮಾರ್ಚ್‌ನಲ್ಲಿ ನಡೆಯುವ ಮೃತ್ಯುಂಜಯ ಶ್ರೀಗಳ ಪುಣ್ಯಾರಾಧನೆ ಅಂಗವಾಗಿ ಬಡ ವಧುವರರಿಗೆ ಸಾಮೂಹಿಕ ಸರಳ ವಿವಾಹ ನಡೆಸಲಾಗುತ್ತದೆ. ಮದುವೆಗೆ ಲಕ್ಷಾಂತರ ರೂ. ಖರ್ಚು ಮಾಡಿ ಸಾಲಗಾರರಾಗುವುದನ್ನು ತಪ್ಪಿಸಿ ಶ್ರೀಮಠ ಹೊಸ ಬದುಕೊಂದನ್ನು ಕಟ್ಟಿಕೊಡುತ್ತಿದೆ.
ಈಗಾಗಲೇ ಶ್ರೀ ಮಠದಿಂದ ಕಾಲೇಜು, ಪ್ರೌಢಶಾಲೆ, ಎಚ್‌ಪಿಎಸ್, ಎಲ್‌ಪಿಎಸ್ ವಿದ್ಯಾಸಂಸ್ಥೆ ನಡೆಸಲಾಗುತ್ತಿದೆ. ಹೊನ್ನಾಳಿಯಲ್ಲಿ ಸುಸಜ್ಜಿತ 100 ಹಾಸಿಗೆ ಹೈಟೆಕ್ ಆಸ್ಪತ್ರೆ ನಿರ್ಮಾಣ ಹಾಗೂ ಕೃಷಿ ಕಾಲೇಜು ಪ್ರಾರಂಭಿಸುವ ಬಗ್ಗೆ ಶ್ರೀಗಳು ಕನಸೊಂದನ್ನು ಕಟ್ಟಿಕೊಂಡಿದ್ದು, ಈ ಬಗ್ಗೆ ಜನಪ್ರತಿನಿಧಿಗಳು, ಭಕ್ತರು ಬಳಿಯೂ ಚರ್ಚಿಸಿದ್ದಾರೆ. ಶೀಘ್ರ ಜಾರಿಗಾಗಿ ಶ್ರಮಿಸುತ್ತಿದ್ದಾರೆ.
ಲಿಂ.ಚಂದ್ರಶೇಖರ ಶ್ರೀಗಳು ಶ್ರೀಮಠದಲ್ಲಿ ಅಕ್ಷರ ಕ್ರಾಂತಿ ಮಾಡಿ ಬಡ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಿದ್ದರು. ಧಾರ್ಮಿಕ ಆಚರಣೆ ಹಾಗೂ ಭಕ್ತರು ಕೋರಿಕೊಂಡ ಹಲವಾರು ಹರಕೆಗಳು ಇಲ್ಲಿ ನೆರವೇರಿದೆ. ಅಂತಹ ಪವಾಡ ಶಕ್ತಿ ಶ್ರೀಮಠ ಹೊಂದಿದೆ. ಮಠ ಯಾವುದೇ ಜಾತಿಗೆ ಸೀಮಿತವಾಗದೆ ಜಾತ್ಯತೀತವಾಗಿದೆ.
-ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು, ಹಿರೇಕಲ್ಮಠ, ಹೊನ್ನಾಳಿ.
ಕೋರ್ಟ್‌ಗಳಲ್ಲಿ ಬಗೆಹರಿಯದ ಎಷ್ಟೋ ವ್ಯಾಜ್ಯಗಳು ಹಿರೇಕಲ್ಮಠದ ಶ್ರೀಗಳ ಸಮ್ಮ್ಮುಖದಲ್ಲಿ ಬಗೆಹರಿದಿವೆ. ಬಗೆಹರಿದ ನಂತರ ಯಾರೂ ತನಗೆ ಅನ್ಯಾಯವಾಯ್ತು ಎಂದಿಲ್ಲ. ಅಂತಹ ಸತ್ಯ ಹಾಗೂ ಶಕ್ತಿ ಮಧ್ಯ ಕರ್ನಾಟಕದ ಹೊನ್ನಾಳಿಯ ಹಿರೇಕಲ್ಮಠಕ್ಕಿದೆ.
-ಸರಳಿಮನೆ ಮಂಜಪ್ಪ, ಮಾಜಿ ಉಪಾಧ್ಯಕ್ಷ, ಪುರಸಭೆ ಹೊನ್ನಾಳಿ.