

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ವಿಧಾನಸಭೆಯಲ್ಲಿ ಅರ್ಧ ತಾಸು ಗೌಪ್ಯ ಸಭೆ ನಡೆಸಿದರು.
ಅಧಿವೇಶನ ಆರಂಭ ಆದಾಗಿನಿಂದಲೂ ಕಲಾಪದಲ್ಲಿ ಕಾಣಿಸಿಕೊಳ್ಳದ ಎಚ್ಡಿಕೆ, ಶುಕ್ರವಾರ ಸಿಎಂ ಭೇಟಿಗೆ ಕೆಲವು ಕಡತದೊಂದಿಗೆ ಆಗಮಿಸಿದ್ದರು. ಈ ಸಂದರ್ಭ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ರ್ಚಚಿಸಿದ ಸಿಎಂ, ಬಳಿಕ ಅಧಿಕಾರಿಗಳನ್ನು ಹೊರಗೆ ಕಳಿಸಿ ಅರ್ಧತಾಸು ಕುಮಾರಸ್ವಾಮಿ ಜತೆ ಚರ್ಚೆ ನಡೆಸಿದರು. ಇತ್ತೀಚೆಗೆ ಕುಮಾರಸ್ವಾಮಿ, ಬಿಎಸ್ವೈ ಭೇಟಿ ಮಾಡಿದ್ದರು. ವಿಶೇಷವೆಂದರೆ, 15 ದಿನಗಳಲ್ಲಿ ಇವರಿಬ್ಬರ ಮೂರನೇ ಸಭೆ ಇದಾಗಿದೆ. ಶಿರಾ ಉಪ ಚುನಾವಣೆಯಲ್ಲಿ ಎರಡು ಪಕ್ಷಗಳ ನಡುವೆ ಒಳ ಒಪ್ಪಂದದ ಮೂಲಕ ಕಾಂಗ್ರೆಸ್ ಸೋಲಿಸುವ ಬಗ್ಗೆ ಚರ್ಚೆ ನಡೆದಿದೆ ಎಂಬ ವದಂತಿಗಳು ವಿಧಾನಸೌಧದ ಮೊಗಸಾಲೆಯಲ್ಲಿ ಹರಿದಾಡುತ್ತಿವೆ.
ಕಾಂಗ್ರೆಸ್ ತಂದಿರುವ ಅವಿಶ್ವಾಸ ನಿರ್ಣಯ ವಿಚಾರದಲ್ಲಿ ಜೆಡಿಎಸ್ ಮೌನವಾಗಿರಬೇಕೆಂದು ಯಡಿಯೂರಪ್ಪ ಮಾಡಿಕೊಂಡ ಮನವಿಗೆ ಕುಮಾರಸ್ವಾಮಿ ಸಮ್ಮತಿಸಿದ್ದಾರೆಂದು ಹೇಳಲಾಗಿದೆ. ಜೆಡಿಎಸ್ ಅನ್ನು ಅವಕಾಶವಾದಿ ಎಂದು ಕರೆದಿರುವ ಕಾಂಗ್ರೆಸ್ ಮುಖಂಡರಿಗೆ ಮುಜುಗರವಾಗುವಂತೆ ನೋಡಿಕೊಳ್ಳುವುದು ತಮ್ಮ ಉದ್ದೇಶವೆಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರೆನ್ನಲಾಗಿದೆ.