

ಶಿವಮೊಗ್ಗ: ರಾಜ್ಯ ಸರ್ಕಾರ ಅ.1ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ವಿಮಾ ವೈದ್ಯಕೀಯ ಸೇವೆಗಳ ದ್ವಿತೀಯ ದರ್ಜೆ ಚಿಕಿತ್ಸೆ ನಿಲ್ಲಿಸಿ, ಕಾರ್ಮಿಕರಿಗೆ ದೊಡ್ಡ ಅನ್ಯಾಯ ಮಾಡಿದೆ. ಈ ರೀತಿ ಚಿಕಿತ್ಸೆ ಸಿಗದೆ ಸಾವು, ನೋವುಗಳಿಗೆ ಕಾರ್ಮಿಕರು ಕಂಗಾಲಾಗಿದ್ದು, ಹಣ ಕಟ್ಟಲಾಗದೆ ಪರದಾಡುತ್ತಿದ್ದಾರೆ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಕಿಡಿಕಾರಿದರು.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಕಾರ್ಮಿಕರಿಗೆ ಸುಳ್ಳು ಭರವಸೆಗಳನ್ನು ನೀಡುತ್ತ ಕಾಲಹರಣ ಮಾಡುತ್ತಿದ್ದಾರೆ. ದ್ವಿತೀಯ ದರ್ಜೆ ಚಿಕಿತ್ಸೆ ನಿಲ್ಲಿಸಿ 22 ದಿನಗಳಾಗಿವೆ. ಈ ವಿಚಾರದಲ್ಲಿ ಸರ್ಕಾರ ಕಾರ್ಮಿಕರ ಜೀವದ ಜತೆ ಆಟವಾಡಬಾರದು. ತಕ್ಷಣ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಇಎಸ್‌ಐ ಚಿಕಿತ್ಸೆ ನೀಡಲು ಮುಂದೆ ಬರುವ ಖಾಸಗಿ ಆಸ್ಪತ್ರೆಗಳಿಗೆ ತಕ್ಷಣ ರಿನಿವಲ್ ಮಾಡಿಕೊಡಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಇಎಸ್‌ಐ ಹಣವನ್ನು ಖಾಸಗಿ ಆಸ್ಪತ್ರೆಗಳಿಗೆ ವಿಳಂಬ ಮಾಡದೆ ಮರುಪಾವತಿಸಬೇಕು. ರಿನಿವಲ್‌ಅನ್ನು ಮೂರು ತಿಂಗಳು, ಆರು ತಿಂಗಳು ಎಂದು ಮಾಡದೆ ಮೂರು ವರ್ಷಕ್ಕೊಮ್ಮೆ ನಿಗದಿಪಡಿಸಬೇಕು. ಆಸ್ಪತ್ರೆಗಳಲ್ಲಿ ಲೋಪಗಳು ಕಂಡುಬಂದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಎಸ್‌ಐ ಸೌಲಭ್ಯ ಪಡೆಯಲು 21 ಸಾವಿರ ರೂ. ವೇತನ ಮಿತಿ ಇರುವುದನ್ನು 38 ಸಾವಿರ ರೂ.ಗೆ ಏರಿಕೆ ಮಾಡಬೇಕು ಎಂದು ಒತ್ತಾಯಿಸಿದರು.
3 ಸಾವಿರ ಕಾರ್ಮಿಕರು ಇರುವ ಕಡೆ ಡಿಸ್ಪೆಂಸರಿ ಯೂನಿಟ್ ತೆರೆಯಬೇಕಾಗುತ್ತದೆ. ಶಿವಮೊಗ್ಗದಲ್ಲಿ 3, ಭದ್ರಾವತಿಯಲ್ಲಿ ಒಂದು ಆಸ್ಪತ್ರೆಗಳಿವೆ. ಶಿಕಾರಿಪುರ ಮತ್ತು ಸಾಗರ ಭಾಗದಲ್ಲಿ ತಲಾ ಒಂದೊಂದು ಆಸ್ಪತ್ರೆಗಳ ಅವಶ್ಯಕತೆ ಇದೆ. ಈ ಬಗ್ಗೆ ಸಚಿವ ಸಂತೋಷ್ ಲಾಡ್ ಅವರಿಗೆ ಮನವರಿಕೆ ಮಾಡಿಕೊಟ್ಟರೂ ಪ್ರಯೋಜನ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾ ಇಎಸ್‌ಐ ವಿಮಾದಾರರ ಹಾಗೂ ಇತರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಾಸಾಬ್ ಎಚ್.ನಂದಿಹಳ್ಳಿ ಮಾತನಾಡಿ, ಶಿವಮೊಗ್ಗಕ್ಕೆ ಇನ್ನೊಂದು ಇಎಸ್‌ಐ ಆಸ್ಪತ್ರೆ ಬೇಕು. ಈಗಿರುವ ಇಎಸ್‌ಐ ಆಸ್ಪತ್ರೆಗಳಲ್ಲಿ ಹಲವು ತೊಂದರೆಗಳು, ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಸಂಘದ ಉಪಾಧ್ಯಕ್ಷ ಬಿ.ಮಹೇಶ್ವರಪ್ಪ, ಕಾರ್ಯದರ್ಶಿ ಎಸ್.ಅಜ್ಜಯ್ಯ, ರವಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.