

ಹುಬ್ಬಳ್ಳಿ : ಭಾರತವು ಆಧ್ಯಾತ್ಮಿಕ ಕೇಂದ್ರವಾಗಿದೆ. ಜೀವನದಲ್ಲಿ ಶಾಂತಿ, ನೆಮ್ಮದಿ ಕಾಣಬೇಕಾದರೆ ಆಧ್ಯಾತ್ಮಿಕತೆ ಅಗತ್ಯ. ಇದೇ ಕಾರಣಕ್ಕಾಗಿ ದೇಶ-ವಿದೇಶಗಳಿಂದ ಜನರು ಮಹಾಕುಂಭಮೇಳದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜೀವನದ ಸತ್ಯ ಅರಸುತ್ತ ವಿದೇಶಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂದು ಲೋಕಸಭೆ ಅಧ್ಯಕ್ಷ ಓಂ ಪ್ರಕಾಶ ಬಿರ್ಲಾ ಹೇಳಿದರು.
ಸಮೀಪದ ವರೂರು ನವಗ್ರಹ ಕ್ಷೇತ್ರದಲ್ಲಿ ಶುಕ್ರವಾರದಂದು ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗೆ ಸಾಂಕೇತಿಕವಾಗಿ ಅಭಿಷೇಕ ಮಾಡುವ ಮೂಲಕ ಕ್ಷೇತ್ರದ ಎರಡನೇ ಮಹಾಮಸ್ತಕಾಭಿಷೇಕಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಧ್ಯಾತ್ಮದಿಂದ ಮಾನಸಿಕ ಸಮತೋಲನ ಸಿಗುತ್ತದೆ. ಸಾಮಾಜಿಕ ಸೇವೆಗೆ ಪ್ರೇರಣೆ ಲಭಿಸುತ್ತದೆ. ಅಹಿಂಸೆ, ಕ್ಷಮಾ ಗುಣಗಳು ಆಧ್ಯಾತ್ಮದ ಶಕ್ತಿಯನ್ನು ಇಮ್ಮಡಿಸುತ್ತವೆ ಎಂದರು.
ಭಗವಾನ್ ಪಾರ್ಶ್ವನಾಥ, ಮಹಾವೀರರ ವಿಚಾರಗಳು ಇಂದಿಗೂ ಪ್ರಸ್ತುತ. ಜೈನ ಧರ್ಮದ ತತ್ವಗಳನ್ನು ಪಾಲಿಸಿದರೆ ವಿಶ್ವದಾದ್ಯಂತ ಶಾಂತಿ ಲಭಿಸುತ್ತದೆ. ಎಲ್ಲ ಧರ್ಮಗಳೂ ಅಹಿಂಸೆ, ಶಾಂತಿಯನ್ನು ಬೋಧಿಸುತ್ತವೆ. ಜನರು ಧರ್ಮಗಳಲ್ಲಿನ ಸಾರವನ್ನು ಅರಿಯಬೇಕು ಹಾಗೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮನಸ್ಸಿನಲ್ಲಿ ಜಂಜಾಟ, ವೈಚಾರಿಕ ಸಂಘರ್ಷ, ದ್ವಂದ್ವಗಳಿದ್ದರೆ ಕೆಟ್ಟ ಯೋಚನೆಗಳನ್ನು ಮಾಡದೇ, ಸಂತರನ್ನು ಭೇಟಿಯಾಗಬೇಕು. ಆ ಮೂಲಕ ಮಾನಸಿಕ ಶಾಂತಿ ಪಡೆಯಬೇಕು ಎಂದು ತಿಳಿಸಿದರು.
ರಾಷ್ಟ್ರಸಂತ, ಯುವಾರ್ಚಾ ಶ್ರೀ ಗುಣಧರನಂದಿ ಮಹಾರಾಜರು ಮಾತನಾಡಿ, ನವಗ್ರಹ ಕ್ಷೇತ್ರದ ಮೊದಲ ಪಂಚಕಲ್ಯಾಣ ಮಹೋತ್ಸವ ಹಾಗೂ ಮಹಾಮಸ್ತಕಾಭಿಷೇಕದಲ್ಲಿ ಎಲ್.ಕೆ. ಅಡ್ವಾಣಿ, ದಿ. ಅನಂತಕುಮಾರ ಮತ್ತಿತರ ಗಣ್ಯರು ಪಾಲ್ಗೊಂಡಿದ್ದನ್ನು ಸ್ಮರಿಸಿದರು.
ಜಂಬು ದ್ವೀಪದ ಮಧ್ಯದಲ್ಲಿರುವ ಸುಮೇರು ಪರ್ವತದ ಮಾದರಿಯನ್ನು ವರೂರು ನವಗ್ರಹ ಕ್ಷೇತ್ರದಲ್ಲಿ ಸ್ಥಾಪಿಸಿದ ತಮ್ಮ ಶಿಷ್ಯ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಕಾರ್ಯವನ್ನು ಆಚಾರ್ಯ ಶ್ರೀ ಕುಂಥುಸಾಗರ ಮುನಿಮಹಾರಾಜರು ಶ್ಲಾಘಿಸಿದರು.
ಅನಿಲಕುಮಾರ ಚೌಗಲಾ, ಜಿತೇಂದ್ರ ಕೊಟಾಡಿಯಾ, ಪ್ರೀತಂ ಗಾಂಧಿ, ತ್ರಿಶಲಾ ಮಾಲಗತ್ತಿ ಮತ್ತಿತರ ದಂಪತಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಶ್ರೀ ಧರ್ಮಸೇನ ಭಟ್ಟಾರಕರು, ಶ್ರೀ ಲಕ್ಷ್ಮೀಸೇನ ಭಟ್ಟಾರಕರು, ಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕರು, ಶ್ರೀ ಸೌರಭಸೇನ ಭಟ್ಟಾರಕರು, ರಾಜ್ಯ ಅಲ್ಪಂಖ್ಯಾತರ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೋಜ ಜೈನ್, ರಾಕೇಶ ಜೈನ್, ಮಹಾಮಸ್ತಕಾಭಿಷೇಕ ಮಹೋತ್ಸವದ ಮಹಾಮಂತ್ರಿ ಮಹೇಂದ್ರ ಸಿಂಘಿ, ಸುರೇಂದ್ರ ಹೆಗ್ಗಡೆ ಹಾಗೂ ಇತರರು ಇದ್ದರು.