

ವಿರಾಜಪೇಟೆ : ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾರ್ಗದರ್ಶನ ಅತೀ ಮುಖ್ಯವಾಗಿದ್ದು, ಅವರ ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಬೇಕು ಎಂದು ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಚೌರಿರ ಜಗತ್ ತಿಮ್ಮಯ್ಯ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಯಶಸ್ಸಿಗೆ ಶಿಕ್ಷಕರ ಮಾರ್ಗದರ್ಶನ ಅತೀ ಮುಖ್ಯ. ವಿದ್ಯಾರ್ಥಿ ಜೀವನ ಮಾತ್ರವಲ್ಲದೆ ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಂತುರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಸ್.ಕುಶನ್ ರೈ, ಜೀವನಕ್ಕೆ ಬೇಕಾದ ಉತ್ತಮ ಮೌಲ್ಯ ಹಾಗೂ ಸಂಸ್ಕಾರಕ್ಕೆ ಅಡಿಪಾಯವಾಗುವುದೇ ಪ್ರೌಢ ಶಿಕ್ಷಣ. ಇಲ್ಲಿ ಕಲಿತ ಸತ್ ಚಿಂತನೆಗಳು ಖಂಡಿತವಾಗಿಯೂ ಮುಂದೊಂದು ದಿವಸ ಉತ್ತಮ ಫಲವನ್ನು ನೀಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂತುರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಬಿ.ಎಸ್.ರೇಖಾ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಎ.ಎನ್.ರಶ್ಮಿ, ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪಿ. ಎಂ. ವೇಣು ಅಪ್ಪಣ್ಣ, ಖಜಾಂಚಿ ವಿ. ಎ.ಯತೀಶ್, ನಿರ್ದೇಶಕರಾದ ಈ. ಯು. ಸೋಮಣ್ಣ, ಎಂ.ಕೆ.ಚಂಗಪ್ಪ, ಪಿ.ಎ.ದೇವಯ್ಯ, ಪಿ.ಡಿ.ಹರೀಶ್, ಕೆ.ಜಿ.ರಾಮಮೂರ್ತಿ, ದಾನಿಗಳಾದ ಬಾಚೆಟ್ಟಿರ ಕಮಲು ಮುದ್ದಯ್ಯ, ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. ತದನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.