

ಮಂಡ್ಯ: ಮಹಾತ್ಮ ಗಾಂಧಿ ಅವರ ಸರಳತೆಯನ್ನು ಅನುಸರಿಸುವುದು ಸುಲಭದ ಮಾತಲ್ಲ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ.ಜಯಪ್ರಕಾಶಗೌಡ ಅಭಿಪ್ರಾಯಪಟ್ಟರು.
ನಗರದ ಗಾಂಧಿಭವನದಲ್ಲಿ ಪ್ರೊ.ಎಂ.ಕರಿಮುದ್ದೀನ್ ಸ್ಮಾರಕ ಸಮಿತಿ ವತಿಯಿಂದ ಆಯೋಜಿಸಿದ್ದ ದ್ವಿತೀಯ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಗಾಂಧಿಯವರ ಚಿಂತನೆಗಳನ್ನು ಅಪ್ಪಿಕೊಳ್ಳುವ ಮನಸ್ಸುಗಳು ಸಮಾಜದಲ್ಲಿ ಬೇಕಿವೆ. ಗಾಂಧಿವಾದಿ ಎಲ್.ನರಸಿಂಹಯ್ಯ ಅವರನ್ನು ನೋಡಿದ ಹಾಗೆ ಅವರು ಗಾಂಧಿ ತತ್ವ ಪಾಲಿಸುತ್ತಿದ್ದಾರೆ. ಗಾಂಧಿ ವಿಚಾರವಾದಗಳು ಮತ್ತು ಅನುಷ್ಟಾನವನ್ನು ಮುನ್ನೆಲಗೆ ತರುವಂತಾಗಬೇಕು. ಪ್ರೊ.ಎಂ.ಕರಿಮುದ್ದೀನ್ ಅವರು ಯಾವ ವರ್ಗಕ್ಕೂ ಸೀಮಿತವಾಗದೇ ಎಲ್ಲರಿಗೂ ಬೇಕಿರುವ ಸರಳ ವ್ಯಕ್ತಿತ್ವದ ಪ್ರಬುದ್ಧರಾಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಪಿಇಟಿ ನಿರ್ದೇಶಕ ಡಾ.ರಾಮಲಿಂಗಯ್ಯ ಮಾತನಾಡಿ, ಗಾಂಧಿ ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು ಎಂಬುದನ್ನು ಮುಂದಿನ ಜನಾಂಗ ನೆನಪಿಸಿಕೊಂಡರೆ ಅವರೂ ಆಶ್ಚರ್ಯ ಪಡುತ್ತಾರೆ. ಜಿಲ್ಲೆಗೆ ಕೀರ್ತಿ ತಂದ ಕೆ.ವಿ.ಶಂಕರಗೌಡ, ಜಿ.ಎಚ್.ಬೊಮ್ಮೇಗೌಡ, ಜಿ.ಮಾದೇಗೌಡ ಸೇರಿದಂತೆ ಹಲವು ಮಹನೀಯರನ್ನು ನೆನಯಬೇಕು. ಇವರೆಲ್ಲರೂ ಗಾಂಧಿ ಪ್ರಭಾವಕ್ಕೆ ಒಳಗಾಗಿದ್ದರು ಎಂದು ವಿವರಿಸಿದರು.
ಶ್ರೀರಂಗಪಟ್ಟಣ ತಾಲೂಕು ಘಟಕದ ಸರ್ವೋದಯ ಮಂಡಲದ ಡಾ.ಬಿ.ಸುಜಯ್‌ಕುಮಾರ್ ಉದ್ಘಾಟಿಸಿದರು. ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಎಚ್.ಎಸ್.ಸುರೇಶ್, ಸಾಹಿತಿ ಲಿಂಗಣ್ಣ ಬಂದೂಕರ್ ಭಾಗವಹಿಸಿದ್ದರು. ಇದೇ ವೇಳೆ ಗಾಂಧಿವಾದಿ ಮತ್ತು ವಿಶ್ರಾಂತ ಅಧ್ಯಾಪಕ ಎಲ್.ನರಸಿಂಹಯ್ಯ ಅವರಿಗೆ ಪ್ರೊ.ಎಂ.ಕರಿಮುದ್ದೀನ್ ಹೆಸರಿನಲ್ಲಿ 10 ಸಾವಿರ ರೂ. ಮತ್ತು ಫಲಕದೊಂದಿಗೆ ಪ್ರಶಸ್ತಿ ನೀಡಲಾಯಿತು. ಆದರೆ ಅವರು 10 ಸಾವಿರ ರೂ.ಗಳನ್ನು ಮತ್ತೆ ವಾಪಸ್ ಸಮಿತಿಗೆ ಹಿಂತಿರುಗಿಸಿ ಪ್ರಬುದ್ಧತೆ ಮೆರೆದರು.