ಕೂಸಿನ ಮನೆ ಗ್ರಾಮೀಣ ಮಕ್ಕಳಿಗೆ ವರದಾನ: ಸಹಾಯಕ ನಿರ್ದೇಶಕ ಸುರೇಂದ್ರ ಅಭಿಮತ

Second stage training workshop Mandya
Published on

ಶ್ರೀರಂಗಪಟ್ಟಣ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕೂಸಿನ ಮನೆ ಗ್ರಾಮೀಣ ಮಕ್ಕಳಿಗೆ ವರದಾನವಾಗಿದೆ. ಈ ಕಾರ್ಯಕ್ರಮದಿಂದ ಗ್ರಾಮೀಣ ಮಕ್ಕಳ ಹಿಂದಿನ ಹಾಗೂ ಇಂದಿನ ಪರಿಸ್ಥಿತಿ ಸಾಕಷ್ಟು ಬದಲಾವಣೆಯಾಗಿದೆ ಎಂದು ಪಾಂಡವಪುರ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ(ಗ್ರಾಮೀಣ ಉದ್ಯೋಗ) ಸುರೇಂದ್ರ ತಿಳಿಸಿದರು.

ತಾಲೂಕಿನ ಗಡಿಭಾಗದಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ತರಬೇತಿ ಸಂಸ್ಥೆಯಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ಕೂಸಿನ ಮನೆಯಲ್ಲಿ ಶಿಶು ಆರೈಕೆ ಮಾಡುವವರಿಗೆ ಆಯೋಜಿಸಿದ್ದ ಎರಡನೇ ಹಂತದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಗಾಗಿ ರಾಜ್ಯಸರ್ಕಾರ ಕೂಸಿನ ಮನೆ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ನರೇಗಾ ಯೋಜನೆಯ ಕೂಲಿಕಾರ್ಮಿಕರ ಮಕ್ಕಳು ಮತ್ತು ಗ್ರಾಮೀಣ ಪ್ರದೇಶದ ಸ್ಥಳೀಯ ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ಕೆಯಾದ ಕೇರ್ ಟೇಕರ್ಸ್‌ಗೆ 7 ದಿನದ ತರಬೇತಿ ನೀಡಲಾಗುತ್ತಿದೆ. ಇವರು ಪೂರ್ಣ ಪ್ರಮಾಣದ ತರಬೇತಿಯಲ್ಲಿ ಭಾಗಿಯಾಗಿ ಕೂಸಿನ ಮನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಗ್ರಾಮೀಣ ಭಾಗದ ಮಹಿಳಾ ಕೂಲಿಕಾರರ ಕೇಂದ್ರೀತ ಯೋಜನೆ ಇದಾಗಿದೆ. ಕೂಸಿನ ಮನೆ ತರಬೇತಿ ಕಾರ್ಯಾಗಾರದಲ್ಲಿ ಮಕ್ಕಳ ಲಾಲನೆ, ಪಾಲನೆ, ಪೋಷಣೆ ಬಗ್ಗೆ ಆರೈಕೆ ಮಾಡುವ ಸಿಬ್ಬಂದಿ ಸಮರ್ಪಕವಾಗಿ ತಿಳಿದುಕೊಂಡಾಗ ಮಾತ್ರ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯ. ಮಕ್ಕಳನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುವುದು ಕೇರ್ ಟೇಕರ್ಸ್ ಕರ್ತವ್ಯವಾಗಿದೆ ಎಂದು ಹೇಳಿದರು.

ಸಂಸ್ಥೆಯ ಪ್ರಾಂಶುಪಾಲ ದಿನೇಶ್ ಪೂಜಾರಿ, ಲೆಕ್ಕ ಸಹಾಯಕ ನಾಗೇಶ್, ಮಾಸ್ಟರ್ ತರಬೇತುದಾರರಾದ ಕುಸುಮಾ, ಜಯಲಕ್ಷ್ಮೀ, ಡಿಟಿಸಿ ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net