

ಧಾರವಾಡ: ಜಿಲ್ಲೆಯಲ್ಲಿ ಆ. 21ರಿಂದ ಸೆ. 2ರವರೆಗೆ ದ್ವಿತೀಯ ಪಿಯುಸಿ 2ನೇ ಪೂರಕ ಪರೀಕ್ಷೆಗಳು ಜರುಗಲಿವೆ. ಸುಗಮ ಮತ್ತು ಪಾರದರ್ಶಕವಾಗಿ ಜರುಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪರೀಕ್ಷೆಯಲ್ಲಿ ನಕಲು ನಡೆಯದಂತೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಅಗತ್ಯ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಧಾರವಾಡ ಶಹರದಲ್ಲಿ 4, ಹುಬ್ಬಳ್ಳಿ ಶಹರ 5, ನವಲಗುಂದ 1, ಕುಂದಗೋಳ 1, ಕಲಘಟಗಿ 1 ಸೇರಿ 12 ಪರೀಕ್ಷಾ ಕೇಂದ್ರಗಳಿವೆ. ನಿಗದಿತ ದಿನಗಳಂದು ಮಧ್ಯಾಹ್ನ 2.15 ರಿಂದ ಪರೀಕ್ಷೆಗಳು ಜರುಗಲಿವೆ. ಪರೀಕ್ಷಾ ಕೇಂದ್ರದ ಸುತ್ತ್ತಲಿನ 200 ಮೀ. ಪ್ರದೇಶವನ್ನು ನಿರ್ಬಂಧಿತ ಪ್ರದೇಶ ಎಂದು ಘೋಷಿಸಿದೆ ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಡಾ. ತೇಜಶ್ವಿನಿ ನಾರಾಯಣಕರ, ಪಿಯು ಕಾಲೇಜು ಪ್ರಾಚಾರ್ಯ ಎ್.ಬಿ. ಸೊರಟೂರ ಹಾಗೂ ವಿವಿಧ ಕಾಲೇಜುಗಳ ಪ್ರಾಚಾರ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.