

ಮಂಗಳೂರು: ಈ ಹಿಂದೆ ಸರ್ಕಾರ ಘೋಷಿಸಿದ್ದ ದ್ವಿತೀಯ ಪಿಯುಸಿ ಫಲಿತಾಂಶವನ್ನು ತಿರಸ್ಕರಿಸಿ, ಮರುಪರೀಕ್ಷೆ ಬರೆದ ದಕ್ಷಿಣ ಕನ್ನಡ ಜಿಲ್ಲೆಯ 32 ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಫೇಲ್ ಆಗುವ ಮೂಲಕ ಚಾಲೆಂಜ್‌ನಲ್ಲಿ ಸೋಲುವಂತಾಗಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ ನಾಲ್ವರಲ್ಲಿ ಒಬ್ಬ ವಿದ್ಯಾರ್ಥಿ ಫೇಲ್ ಆಗಿದ್ದು, ಉಳಿದಂತೆ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲ 25 ಮಂದಿ ಹಾಗೂ ಕಲಾವಿಭಾಗದಲ್ಲಿ ಎಲ್ಲ ಮೂವರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿ ಹಾಗೂ ಪುನರಾವರ್ತಿತ ಸೇರಿ ಜಿಲ್ಲೆಯಲ್ಲಿ 1067 ವಿದ್ಯಾರ್ಥಿಗಳು ಪರೀಕ್ದೆ ಬರೆದಿದ್ದು, ಇದರಲ್ಲಿ 528 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗುವ ಮೂಲಕ ಜಿಲ್ಲೆ ಶೇ.49.48 ಫಲಿತಾಂಶ ದಾಖಲಿಸಿದೆ.
1032 ಖಾಸಗಿ ವಿದ್ಯಾರ್ಥಿಗಳಲ್ಲಿ 494 ಮಂದಿ ಮಾತ್ರ ಪರೀಕ್ಷೆ ಕ್ಲಿಯರ್ ಮಾಡಿದ್ದಾರೆ. ಪುನರಾವರ್ತಿತ ಎಲ್ಲ ಮೂರು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.64.45ರಷ್ಟು ಹುಡುಗಿಯರು ಮತ್ತು ಶೇ.39.14 ಹುಡುಗರು ಉತ್ತೀರ್ಣರಾಗಿದ್ದಾರೆ.