

ಮಂಡ್ಯ: ಜಿಲ್ಲೆಯಲ್ಲಿ ಏ.24 ರಿಂದ ಮೇ 5 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಲಿದೆ. ಕೇಂದ್ರಗಳಲ್ಲಿ ಯಾವುದೇ ರೀತಿಯ ಲೋಪಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-2 ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ನಡೆಸಬೇಕು. ಜಿಲ್ಲೆಯ 8 ಕೇಂದ್ರಗಳಲ್ಲಿ 5,325 ಪುನರಾವರ್ತಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಜಿಲ್ಲಾ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಕೊಂಡೊಯ್ಯಲು ತಹಸೀಲ್ದಾರ್, ಬಿಇಒ ಹಾಗೂ ಪ್ರಾಂಶುಪಾಲರನ್ನು ಒಳಗೊಂಡಂತೆ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಒಟ್ಟು ಆರು ಮಾರ್ಗಗಳ ಮೂಲಕ ಪ್ರಶ್ನೆಪತ್ರಿಕೆಯನ್ನು ಸಾಗಿಸಲಾಗುವುದು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಉತ್ತಮ ಮೂಲ ಸೌಕರ್ಯಗಳಾದ ಪೀಠೋಪಕರಣ ಹಾಗೂ ಕುಡಿಯುವ ನೀರಿನ ವ್ಯವಸ್ಥೆ, ಶೌಚಗೃಹ ವ್ಯವಸ್ಥೆ ಹಾಗೂ ಇನ್ನಿತರ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರತಿ ಕೇಂದ್ರಕ್ಕೂ ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಸುಸಜ್ಜಿತ ವಿದ್ಯುತ್ ವ್ಯವಸ್ಥೆ ಕಲ್ಪಿಸಲಾಗಿದೆ. ಪರೀಕ್ಷೆಗಳು ನಡೆಯುವ ದಿನಗಳಂದು ಕೇಂದ್ರದಿಂದ 200 ಮೀ. ಸುತ್ತಮುತ್ತಲಿನಲ್ಲಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಅಂತೆಯೇ ಜೆರಾಕ್ಸ್ ಅಂಗಡಿಗಳು ತೆರೆಯದಂತೆ ಕ್ರಮ ವಹಿಸಲಾಗುವುದು.ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್‌ಲೈನ್ ಲಾಗಿನ್ ಪೋರ್ಟಲ್ ಮೂಲಕ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಶಸ್ತ್ರಾಸ್ತ್ರ ಪೊಲೀಸ್ ರಕ್ಷಣೆ ಒದಗಿಸಲಾಗುವುದು. ಪರೀಕ್ಷಾ ದಿನಗಳಂದು ಪ್ರಶ್ನೆಪತ್ರಿಕೆ ವಿತರಕರ ತಂಡಗಳೊಂದಿಗೆ ಶಸ್ತ್ರಾಸ್ತ್ರ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಸಿಸಿಟಿವಿ ವೆಬ್ ಕಾಸ್ಟಿಂಗ್ ವೀಕ್ಷಿಸಲು ವಿಶೇಷ ತಂಡ ರಚಿಸಲಾಗಿದೆ. ವೆಬ್ಕಾಸ್ಟಿಂಗ್ ಅನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ವೀಕ್ಷಿಸಲಾಗುವುದು. ಮೇಲ್ವಿಚಾರಕರು ಎಚ್ಚರಿಕೆಯಿಂದ ಪರೀಕ್ಷೆಯನ್ನು ನಡೆಸಬೇಕೆಂದು ತಿಳಿಸಿದರು.
ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚೆಲುವಯ್ಯ, ಜಿಲ್ಲಾ ಖಜಾನೆಯ ಮುಖ್ಯಲೆಕ್ಕಿಗ ಜಿ.ಜೆ.ಬಸವಣ್ಣ, ಜಿಲ್ಲಾ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ಕೆ.ಆರ್.ಪೇಟೆ ಗ್ರೇಡ್-2 ತಹಸೀಲ್ದಾರ್ ಬಿ.ಆರ್.ಲೋಕೇಶ್, ನಗರಸಭೆ ಪರಿಸರ ಇಂಜಿನಿಯರ್ ರುದ್ರೇಗೌಡ, ಶಿರಸ್ತೇದಾರ್ ಚಂದ್ರಶೇಖರ್ ಸೇರಿದಂತೆ ವಿವಿಧ ಕಾಲೇಜಿನ ಪ್ರಾಚಾರ್ಯರು ಇದ್ದರು.