ಏ.29ರಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾಹಿತಿ

Second PUC Exam Prelims Meeting mandya
Published on

ಮಂಡ್ಯ: ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲಿ ಏ.29 ರಿಂದ ಮೇ.16ರವರೆಗೆ ಪೂರಕ ಪರೀಕ್ಷೆ ನಡೆಯಲಿದೆ. ಆದ್ದರಿಂದ ಪಾರದರ್ಶಕ ಹಾಗೂ ಪ್ರಾಮಾಣಿಕವಾಗಿ ಪರೀಕ್ಷೆ ಪ್ರಕ್ರಿಯೆ ನಡೆಯುವಂತೆ ಎಚ್ಚರಿಕೆ ವಹಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ 8 ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದೆ. ಈ ಎಲ್ಲ ಕೇಂದ್ರವೂ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸುವುದರ ಜತೆಗೆ ವೆಬ್‌ಕಾಸ್ಟಿಂಗ್ ಸಹ ಮಾಡಲಾಗುವುದು ಎಂದು ಹೇಳಿದರು.

ಕೆ.ಆರ್.ಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ನಾಗಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ(ಕಲ್ಲು ಕಟ್ಟಡ) ಕಾಲೇಜು ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು(ಮಾಜಿ ಪುರಸಭೆ), ಮದ್ದೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪಾಂಡವಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಳವಳ್ಳಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ತೆರೆಯಲಾಗುವುದು. ಪರೀಕ್ಷೆ ನಡೆಯುವ ದಿನ ಕೇಂದ್ರ ಸುತ್ತಲೂ 200 ಮೀ ಸುತ್ತಳತೆಯಲ್ಲಿ 144ನೇ ಕಲಂ ಜಾರಿಯಾಗಲಿದೆ. ಅಂತೆಯೇ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಿಸಬೇಕು ಎಂದರು.

ಜಿಲ್ಲಾ ಖಜಾನೆಯಿಂದ ಸಂಬಂಧಿಸಿದ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ವಿತರಿಸಲು ಪ್ರಶ್ನೆಪತ್ರಿಕೆ ಮಾರ್ಗಾಧಿಕಾರಿ ತಂಡಕ್ಕೆ ಅಗತ್ಯವಿರುವ ವಾಹನಗಳ ಸೌಕರ್ಯವನ್ನು ಒದಗಿಸಬೇಕು. ವಿಶೇಷ ಪ್ರಶ್ನೆಪತ್ರಿಕೆ ಪಾಲಕರಾಗಿ ನೇಮಕಗೊಂಡಿರುವ ಅಧಿಕಾರಿಗಳು ಬಯೋ ಮೆಟ್ರಿಕ್‌ನಲ್ಲಿ ಮಾಹಿತಿಯನ್ನು ನೋಂದಾಯಿಸಿಕೊಂಡು ಖುದ್ದು ಜಿಲ್ಲಾ ಖಜಾನೆಯಿಂದ ಪರೀಕ್ಷಾ ಗೌಪ್ಯ ವಸ್ತುಗಳನ್ನು ಸ್ವೀಕರಿಸಿ ಸಂಬಂಧಿಸಿದ ಕೇಂದ್ರಗಳಿಗೆ ಸರಿಯಾದ ಸಮಯದಲ್ಲಿ ತಲುಪಿಸಬೇಕು. ಪರೀಕ್ಷಾ ದಿನಗಳಂದು ’ಪ್ರಶ್ನೆಪತ್ರಿಕೆ ವಿತರಕರ’ ತಂಡದ ಬೆಂಗಾವಲಿಗೆ ಸಶಸ್ತ್ರ ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೇಂದ್ರಗಳಲ್ಲಿ ಮುಖ್ಯ ಅಧೀಕ್ಷಕರನ್ನು ಹೊರತುಪಡಿಸಿ ಕೊಠಡಿ ಮೇಲ್ವಿಚಾರಕರು ಹಾಗೂ ಇತರೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮೊಬೈಲ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯ, ಸೂಕ್ತ ಆಸನದ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಬೇಕು. ಜಿಲ್ಲೆಯಲ್ಲಿ ಯಾವುದೇ ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪರೀಕ್ಷಾ ಕೇಂದ್ರ ಇರುವುದಿಲ್ಲ. ಪರೀಕ್ಷೆಗಳನ್ನು ಯಥಾಕ್ರಮದಂತೆ ಜರುಗಿಸಲು ಆಯಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ಸವಿವರವಾದ ಮಾರ್ಗಸೂಚಿ ಕಳುಹಿಸಲಾಗಿದೆ. ಕಾಲಕಾಲಕ್ಕೆ ಅಗತ್ಯ ಸಹಕಾರ ಹಾಗೂ ಮಾರ್ಗದರ್ಶನಗಳನ್ನು ಒದಗಿಸಲು ಇಲಾಖೆಯ ವತಿಯಿಂದ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚೆಲುವಯ್ಯ, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ, ರಾಜೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net