

ಶಿವಮೊಗ್ಗ: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಗುರುವಾರದಿಂದ ಆರಂಭಗೊಂಡಿದ್ದು ಸಾವಿರಾರು ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪರೀಕ್ಷೆಯನ್ನು ಎದುರಿಸಿದರು. ಈ ನಡುವೆಯೂ ಮೊದಲ ದಿನವೇ 540 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾದರು.
ಮೊದಲ ದಿನ ಜಿಲ್ಲೆಯ 36 ಪರೀಕ್ಷಾ ಕೇಂದ್ರಗಳಲ್ಲಿ ಕನ್ನಡ ಪರೀಕ್ಷೆ ನಡೆದಿದ್ದು 15,461 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದರು. ಅದರಲ್ಲಿ 14,921 ಮಂದಿ ಪರೀಕ್ಷೆ ಬರೆದರು. ವಿವಿಧ ಕಾರಣಗಳಿಂದ 540 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರವೇ ಉಳಿದರು.
ಮಾ.29ರವರೆಗೆ ಪರೀಕ್ಷೆಗಳು ನಡೆಯಲಿವೆ. ಕರೊನಾ ಕಾರಣಗಳಿಂದ ಕಳೆದ ಎರಡು ವರ್ಷ ಆತಂಕದಲ್ಲೇ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಈ ಬಾರಿ ಯಾವುದೇ ಗೊಂದಲಕ್ಕೆ ಒಳಗಾಗದೇ ಪರೀಕ್ಷೆ ಎದುರಿಸಿದರು. ಅದರಲ್ಲೂ ಮಾತೃಭಾಷೆ ವಿಷಯವೇ ಮೊದಲ ದಿನ ಇದ್ದ ಕಾರಣ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಪರೀಕ್ಷೆ ಬರೆದು ಹೊರಬಂದರು.