ವರೂರು ನವಗ್ರಹ ಕ್ಷೇತ್ರದಲ್ಲಿ ದ್ವಿತೀಯ ಮಹಾಮಸ್ತಕಾಭಿಷೇಕ

New Varur New
Published on

ಹುಬ್ಬಳ್ಳಿ : ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದ 61ಅಡಿ ಎತ್ತರದ ಭಗವಾನ ಶ್ರೀ ಪಾರ್ಶ್ವನಾಥರ ಮಹಾಮಸ್ತಕಾಭಿಷೇಕ ಹಾಗೂ 405 ಅಡಿ ಎತ್ತರದ ಸುಮೇರು ಪರ್ವತ ಜಿನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹಾಮಹೋತ್ಸವ ಸಮಾರಂಭವನ್ನು 2025ರ ಜ. 15ರಿಂದ 26ರವರೆಗೆ ಆಯೋಜಿಸಲಾಗಿದೆ.

ನವಗ್ರಹ ತೀರ್ಥಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು, ಶ್ರವಣಬೆಳಗೊಳ ಗೊಮ್ಮಟೇಶ್ವರ ಮಹಾಮಸ್ತಕಾಭಿಷೇಕ ಮಾದರಿಯಲ್ಲಿ ಇಲ್ಲಿಯೂ ಮಹಾಮಸ್ತಕಾಭಿಷೇಕ ನಡೆಯಲಿದೆ. 12 ವರ್ಷಗಳ ನಂತರ ನಡೆಯುತ್ತಿರುವ ಎರಡನೇ ಮಹಾಮಸ್ತಕಾಭಿಷೇಕ ಇದು ಎಂದು ತಿಳಿಸಿದರು.

ಜ. 15ರಿಂದ 20ರವರೆಗೆ ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಜ. 15 ಹಾಗೂ 16ರಂದು ಭಗವಾನ ಪಾರ್ಶ್ವನಾಥ ತೀರ್ಥಂಕರ ಗರ್ಭಕಲ್ಯಾಣ ಮಹೋತ್ಸವ, 17ರಂದು ಭಗವಾನ ಪಾರ್ಶ್ವನಾಥರ ರಾಜ್ಯಾಭಿಷೇಕ, 19ರಂದು ಕೇವಲ ಜ್ಞಾನ, 20ರಂದು ಮೋಕ್ಷ ಕಲ್ಯಾಣ ಮಹೋತ್ಸವ ನಡೆಯಲಿದೆ.

ಜ. 20ರ ನಂತರ ನವಗ್ರಹದ ತೀರ್ಥಂಕರ ಮೂರ್ತಿಗಳಿಗೆ ನಿತ್ಯ ಅಭಿಷೇಕ ನಡೆಯಲಿದೆ. 21ರಂದು ನವಗ್ರಹ ಕ್ಷೇತ್ರದಲ್ಲಿನ 9 ತೀರ್ಥಂಕರರ ಮೂರ್ತಿಗಳಿಗೆ ಜನಸಾಮಾನ್ಯರಿಂದ ಜಲಾಭಿಷೇಕ ನಡೆಯಲಿದೆ. 22ರಂದು ಮೂರ್ತಿಗಳ ದಾನಿಗಳಿಂದ ಅಭಿಷೇಕ, 25ರಂದು ಇಂದ್ರ-ಇಂದ್ರಾಣಿಯರಿಂದ ಮಹಾಮಸ್ತಕಾಭಿಷೇಕ ಜರುಗಲಿದೆ. 22, 23 ಹಾಗೂ 24ರಂದು ಹೆಲಿಕಾಪ್ಟರ್​ನಿಂದ ನವಗ್ರಹ ತೀರ್ಥಂಕರರ ಮೇಲೆ ಪುಷ್ಪವೃಷ್ಟಿ ನೆರವೇರಲಿದೆ. 23ರಂದು ಮುಂಜಿ ಬಂಧನ, ಮಂತ್ರ ಸಂಸ್ಕಾರ ಹಾಗೂ ವೃತ ಸಂಸ್ಕಾರ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಜೈನ ಸಮಾಜದ ಮುನಿಗಳು ತಮಿಳುನಾಡು, ರಾಜಸ್ಥಾನ, ಗುಜರಾತ, ಮಹಾರಾಷ್ಟ್ರ ಹಾಗೂ ಇನ್ನಿತರ ರಾಜ್ಯಗಳಿಂದ ಜ. 1ರಿಂದ ನವಗ್ರಹ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಅಮೆರಿಕ, ಫ್ರಾನ್ಸ್, ಜರ್ಮನ್ ಹಾಗೂ ಇನ್ನಿತರ ದೇಶಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ಜ. 15ರಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, 16ರಂದು ಉಪರಾಷ್ಟ್ರಪತಿ ಜಗದೀಪ ಧನಕರ ಆಗಮಿಸಲಿದ್ದಾರೆ. 20ರಂದು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದಗೌಡರ, 21ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, 22ಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಮಂಗೇಶ ಭೇಂಡೆ, 23ಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ವಿ. ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಾಗೂ ಕೇಂದ್ರ, ರಾಜ್ಯಗಳ ಸಚಿವರು, ಸಂಸದರು, ಶಾಸಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕರ್ನಾಟಕ ಸೇರಿದಂತೆ ರಾಜಸ್ಥಾನ, ಪಂಜಾಬ, ಮೇಘಾಲಯ, ಕೇರಳದ ರಾಜ್ಯುಪಾಲರು ಭಾಗವಹಿಸುವರು ಎಂದರು.

ಸಂಗೀತ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ. ಜ. 17ಕ್ಕೆ ವಿಜಯಪ್ರಕಾಶ , ಅನುರಾಧಾ ಭಟ್, 20ಕ್ಕೆ ಅರ್ಜುನ ಜನ್ಯ, ಅನುಶ್ರೀ, 22ರಂದು ರಾಜೇಶ ಕೃಷ್ಣ , 23ಕ್ಕೆ ಸಾಧುಕೋಕಿಲ, ರಘು ದೀಕ್ಷಿತ, 24ಕ್ಕೆ ತರುಣ, ರವಿಚಂದ್ರನ್ ಹಾಗೂ ಮತ್ತಿತರ ಕಲಾವಿದರು ಭಾಗವಹಿಸುವರು ಎಂದರು.

ಆಚಾರ್ಯ ಶ್ರೀಗಳಾದ ಕುಂತುಸಾಗರ, ಶ್ರೀ ಪದ್ಮನಂದಿ, ಶ್ರೀ ದೇವನಂದಿ, ಶ್ರೀ ಸೂರ್ಯಸಾಗರ, ಶ್ರೀ ಗುಪ್ತಿನಂದಿ ಸೇರಿದಂತೆ ಇತರ ಮಹಾರಾಜರು, ಪೇಜಾವರ ಶ್ರೀಗಳು, ಆದಿಚುಂಚನಗಿರಿ ಮಠದ ಸ್ವಾಮೀಜಿ ಸೇರಿದಂತೆ ಇತರ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net