

ಮಂಡ್ಯ: ಲೋಕಸಭಾ ಚುನಾವಣೆ ಸಂಬಂಧ ಪಿಆರ್‌ಒ, ಎಪಿಆರ್‌ಒ ಹಾಗೂ ಪೋಲಿಂಗ್ ಅಧಿಕಾರಿಗಳಿಗೆ ಎರಡನೇ ಹಂತದ ತರಬೇತಿ ನೀಡಲಾಗುತ್ತಿದೆ. ಯಾವುದೇ ಗೊಂದಲ ಇದ್ದರೂ ಪರಿಹರಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಚುನಾವಣಾ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮತಗಟ್ಟೆವಾರು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಗುಂಪು ಮಾಡಿ ತರಬೇತಿ ನೀಡಲಾಗುತ್ತಿದೆ. ಏ.25 ಹಾಗೂ 26 ರಂದು ಮುಖ್ಯವಾಗಿ ಕಾರ್ಯನಿರ್ವಹಿಸಬೇಕಿರುವ ಅಂಶಗಳನ್ನು ಪಟ್ಟಿ ಮಾಡಿಕೊಂಡು ಮನನ ಮಾಡಿಕೊಳ್ಳಿ ಎಂದರು.
ಮತದಾನದ ದಿನದಂದು ಯಾವುದಾದರೂ ಸಣ್ಣ ತಪ್ಪು ಆಗದಂತೆ ಎಚ್ಚರಿಕೆ ವಹಿಸಿ. ಮತದಾನ ಮುಕ್ತಾಯವಾದ ನಂತರ ಕ್ಲೋಸ್ ಬಟನ್ ಒತ್ತುವುದನ್ನು ಮರೆತರೆ ಏಣಿಕೆ ಸಂದರ್ಭದಲ್ಲಿ ಬಹಳಷ್ಟು ಕೆಲಸ ನಿರ್ವಹಿಸಬೇಕಾಗುತ್ತದೆ. ಸಣ್ಣ ತಪ್ಪುಗಳು ದೊಡ್ಡ ಕೆಲಸಗಳನ್ನು ತರುತ್ತದೆ. ಎಲ್ಲ ಪಿಆರ್‌ಒಗಳಿಗೆ ಹ್ಯಾಂಡ್‌ಬುಕ್ ನೀಡಲಾಗಿದೆ. ಅದರಂತೆ ಕಾರ್ಯನಿರ್ವಹಿಸಿ. ಚುನಾವಣಾ ಕರ್ತವ್ಯ ಪತ್ರದ ಹಿಂಬದಿ ಬಸ್ ವ್ಯವಸ್ಥೆ ಹಾಗೂ ಸಮಯವನ್ನು ನಮೂದಿಸಿದೆ. ನಿಗದಿಪಡಿಸಿರುವ ಸಮಯಕ್ಕೆ ವರದಿ ಮಾಡಿಕೊಳ್ಳಿ ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಇತರರಿದ್ದರು. ಚುನಾವಣಾ ತರಬೇತಿ ಏರ್ಪಡಿಸಿರುವ ಎಲ್ಲ ತಾಲೂಕಿನಲ್ಲಿ ಸಿಬ್ಬಂದಿಗೆ ಆಯುಷ್ ಇಲಾಖೆ ವತಿಯಿಂದ ಚಿಂಚಾ, ಸೊಗಡೆ ಬೇರು ಪಾನಕ ವಿತರಿಸಲಾಯಿತು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಮದ್ದೂರು, ನಾಗಮಂಗಲ, ಕೆ.ಆರ್.ಪೇಟೆ ತಾಲೂಕಿನಲ್ಲಿ ನಡೆಯುತ್ತಿದ್ದ ತರಬೇತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಮಂಗಲದ ತರಬೇತಿ ಸ್ಥಳದಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ಅಂತೆಯೇ ಕುಡುಗಬಾಳು ಹಾಗೂ ದೇವಲಾಪುರ ಚೆಕ್‌ಫೋಸ್ಟ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.