ಕ್ವಾರಿ ಮಾಲೀಕರ ಸಂಘಟನೆ ವತಿಯಿಂದ ಎಐಟಿಯುಸಿಯ ಎರಡನೇ ಜಿಲ್ಲಾ ಸಮ್ಮೇಳನ

10
Published on

ಮೈಸೂರು: ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಮಾಲೀಕರ ಸಂಘಟನೆ ವತಿಯಿಂದ ಎಐಟಿಯುಸಿಯ ಎರಡನೇ ಜಿಲ್ಲಾ ಸಮ್ಮೇಳನದ ಅಂಗವಾಗಿ ನಗರದ ಗಾಂಧಿ ವೃತ್ತದಲ್ಲಿ ಭಾನುವಾರ ಬಹಿರಂಗ ಸಭೆ ನಡೆಯಿತು.

ಈ ವೇಳೆ ಎಐಟಿಯುಸಿಯ ರಾಜ್ಯ ಕಾರ್ಯದರ್ಶಿ ಗಿರೀಶ್ ತುಮಕೂರು ಮಾತನಾಡಿ, ಕಾರ್ಮಿಕ ಸಚಿವರು ಕಟ್ಟಡ ಕಾರ್ಮಿಕರಿಗೆ ಅನಗತ್ಯವಿರುವ ಕಿಟ್‌ಗಳನ್ನು ನೀಡಲು ಮುಂದಾಗಿದ್ದಾರೆ. ಮತ್ತೊಂದೆಡೆ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಮಾಡಲು 400 ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ. ಆದರೆ, ರಾಜ್ಯ ಸರ್ಕಾರ 30 ಸಾವಿರ ಕೋಟಿ ರೂ.ಗಳನ್ನು ಬಜೆಟ್ ಮೂಲಕ ಆರೋಗ್ಯ ಇಲಾಖೆಗೆ ಹಣ ನೀಡಿದೆ. ಈ 400 ಕೋಟಿ ರೂ. ಹಣದ ಆರೋಗ್ಯ ತಪಾಸಣೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮಾಡಲು ಮುಂದಾಗಿದ್ದು ಇದು ಭ್ರಷ್ಟಚಾರಕ್ಕೆ ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಕಟ್ಟಡ ಕಾರ್ಮಿಕರಿಗೆ ಮೀಸಲಿಟ್ಟಿರುವ ಅನುದಾನವನ್ನು ಯಾವುದೇ ಸರ್ಕಾರವು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಬಾರದು. ಕಾರ್ಮಿಕರಿಗೆ ಇರುವ ಶೇ.1ರಷ್ಟರ ಸೆಸ್ ಹಣವನ್ನು ಕಾಯ್ದೆ ಮೂಲಕ ಶೇ.2ರಷ್ಟು ಮಾಡಲು ಅವಕಾಶವಿದೆ ಅದನ್ನು ಮಾಡಬೇಕಿದೆ ಎಂದು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಮುಖಂಡರಾದ ಸೋಮರಾಜೇ ಅರಸ್, ಎಚ್.ಬಿ.ರಾಮಕೃಷ್ಣ, ಎನ್.ಕೆ.ದೇವದಾಸ್, ಮುಜಾಹಿದ್ ಪಾಷ, ಮಹಾದೇವಮ್ಮ, ಹೊನ್ನೇಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net