ಎರಡನೇ ದಿನ ಪ್ರಯಾಣಿಕರ ಸಂಖ್ಯೆ ಇಳಿಮುಖ

23
Published on

ಮೈಸೂರು: ಕೆಎಸ್‌ಆರ್‌ಟಿಸಿ ಹಾಗೂ ನಗರ ಸಾರಿಗೆ ಬಸ್‌ಗಳು ಎರಡನೇ ದಿನವೂ ಸಂಚರಿಸಿದವು. ಮೊದಲ ದಿನ ಇದ್ದ ಬೇಡಿಕೆ ಕಡಿಮೆಯಾದರೂ ಬೆಂಗಳೂರಿಗೆ ಹೆಚ್ಚಿನ ಬಸ್‌ಗಳು ಸಂಚರಿಸಿದವು.

ಪ್ರಯಾಣಿಕರ ಸಂಖ್ಯೆ ಇಳಿಮುಖವಾದ್ದರಿಂದ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ತೆರೆಯಲಾಗಿದ್ದ ಕೌಂಟರ್ ಸಂಖ್ಯೆ ಮೂರರಿಂದ ಎರಡಕ್ಕೆ ಇಳಿಯಿತು. ಬೆಂಗಳೂರಿಗೆ ತೆರಳುವವರಿಗೆ ಪ್ರತ್ಯೇಕ ಕೌಂಟರ್ ಇದ್ದರೆ, ಬೇರೆ, ಬೇರೆ ಜಿಲ್ಲೆಗಳಿಗೆ ತೆರಳುವವರಿಗಾಗಿ ಒಂದು ಕೌಂಟರ್ ಇತ್ತು. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸ್ಯಾನಿಟೈಸರ್ ನೀಡಿ, ಥರ್ಮಲ್ ಸ್ಕ್ರೀನಿಂಗ್ ಮಾಡಿ ಮುಂದೆ ಬಿಡಲಾಯಿತು.

ಪರಸ್ಪರ ಅಂತರ ಇಲ್ಲ: ಎರಡನೇ ದಿನವೇ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಪರಸ್ಪರ ಅಂತರ ಕಾಯುವಲ್ಲಿ ಪ್ರಯಾಣಿಕರು ವಿಫಲರಾದರು. ನಿಲ್ದಾಣದಲ್ಲಿದ್ದ ಆಸನಗಳಲ್ಲಿ ಒಬ್ಬರ ಪಕ್ಕ ಮತ್ತೊಬ್ಬರು ಆರಾಮಾಗಿ ಕುಳಿತಿದ್ದರು. ಇವರಲ್ಲಿ ಕೆಲವರು ಮಾಸ್ಕ್ ಧರಿಸದಿದ್ದರೂ, ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸರು, ಈ ಬಗ್ಗೆ ವಿಚಾರಿಸುವ ಗೋಜಿಗೆ ಹೋಗಲಿಲ್ಲ.

ಬೆಂಗಳೂರಿಗೆ ಕರ್ನಾಟಕ ಸಾರಿಗೆ ಮತ್ತು ರಾಜಹಂಸ ಬಸ್‌ಗಳು ಮಾತ್ರ ಸಂಚರಿಸಿದವು. ಉಳಿದಂತೆ ಉಡುಪಿ, ಮಂಗಳೂರು, ಶಿವಮೊಗ್ಗ, ತುಮಕೂರು, ಚಾಮರಾಜನಗರ, ಹಾಸನ, ಕೊಡಗು, ಚಿಕ್ಕಮಗಳೂರು ಸೇರಿ ಇತರ ಭಾಗಗಳಿಗೆ ಸಾರಿಗೆ ಬಸ್ ಸಂಚರಿಸಿದವು. ಬೆಂಗಳೂರು ಹೊರತುಪಡಿಸಿ ಇತರೆಡೆಗೆ ತೆರಳುವ ಬಸ್‌ನ ಚಾಲಕರು, ಪ್ರಯಾಣಿಕರಿಗಾಗಿ ಕಾಯಬೇಕಾಯಿತು.

ಭಣಗುಡುತ್ತಿದ್ದ ನಗರ ನಿಲ್ದಾಣ: ಹೊರ ಜಿಲ್ಲೆಗಳಿಗೆ ತೆರಳಲು ಗ್ರಾಮಾಂತರ ನಿಲ್ದಾಣಕ್ಕೆ ಪ್ರಯಾಣಿಕರು ಬಂದರೆ, ನಗರ ಸಾರಿಗೆ ಸೇವೆ ಇರುವ ನಗರ ಬಸ್ ನಿಲ್ದಾಣ ಭಣಗುಡುತ್ತಿತ್ತು.

ನಗರ ಬಸ್ ನಿಲ್ದಾಣದಲ್ಲಿ ಜನ, ಬಸ್‌ಗಳ ಸಂಚಾರ ವಿರಳವಾಗಿತ್ತು. ನಿತ್ಯ ಸುಮಾರು 480 ಬಸ್‌ಗಳು ಸಂಚರಿಸುತ್ತಿದ್ದ ನಿಲ್ದಾಣದಲ್ಲಿ ಬುಧವಾರ 60 ಬಸ್‌ಗಳು ಮಾತ್ರ ಸಂಚರಿಸಿದವು. ಸಂಚರಿಸಿದ ಬಸ್‌ಗಳಲ್ಲಿ 10ಕ್ಕಿಂತ ಕಡಿಮೆ ಪ್ರಯಾಣಿಕರು ಇದ್ದರು. ಹೀಗಾಗಿ ನಗರ ಸಾರಿಗೆ ನಿರ್ವಹಣೆ, ಚಾಲಕರು, ಪ್ರಯಾಣಿಕರು ಆಗಮನಕ್ಕಾಗಿ ಕಾಯ್ದು, ನಿಲ್ದಾಣದಲ್ಲಿಯೇ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರು.

ಈ ಹಿಂದೆ ನಿತ್ಯ ಹೆಚ್ಚು ಜನರು ಸಂಚರಿಸುತ್ತಿದ್ದ 10ರಿಂದ 15 ಮಾರ್ಗಗಳಲ್ಲಿ ಬಸ್ ಸಂಚರಿಸಿದರೂ ಜನರು ಕರೊನಾ ವೈರಸ್‌ನಿಂದ ಸಾರ್ವಜನಿಕ ಸಾರಿಗೆ ಬಿಟ್ಟು ಸ್ವಂತ ವಾಹನಗಳ ಮೊರೆ ಹೋಗಿದ್ದು, ಹೆಚ್ಚಾಗಿತ್ತು.

ನಿರಾಸೆಯಲ್ಲಿ ಆಟೋ ಚಾಲಕರು: ಲಾಕ್‌ಡೌನ್ ಸಡಿಲಿಕೆ ಬಳಿಕ ರಸ್ತೆಗಿಳಿದ ಆಟೋ, ಟ್ಯಾಕ್ಸಿಗಳ ಬಗ್ಗೆಯೂ ಜನರು ಹೆಚ್ಚು ಒಲವು ತೋರಲಿಲ್ಲ. ಹೀಗಾಗಿ ಆಟೋ, ಟ್ಯಾಕ್ಸಿ ಚಾಲಕರು ಪ್ರಯಾಣಿಕರ ಆಗಮನಕ್ಕಾಗಿ ಎದುರು ನೋಡುತ್ತಿದ್ದರು. ಆದರೆ, ಹೊರಗಿನಿಂದ ಬರುವ ಪ್ರಯಾಣಿಕರು ಕಡಿಮೆ ಇದ್ದುದ್ದರಿಂದ ಪ್ರಯಾಣಿಕರಿಗಾಗಿ ಕಾಯುವ ಸ್ಥಿತಿ ಉಂಟಾಗಿತ್ತು. ಕೆಲವರು ಆಟೋಗಳ ಮೊರೆ ಹೋದರೆ, ಬಹುತೇಕರು ಅವರ ಕುಟುಂಬದವರು ತರುವ ವಾಹನಗಳಲ್ಲಿ ತೆರಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net