

ಮಂಡ್ಯ: ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಯುಗಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಮಂಡ್ಯ ವಿಶ್ವವಿದ್ಯಾಲಯದಲ್ಲಿ ತಂತ್ರಜ್ಞಾನ ಆಧಾರಿತ ಹೊಸ ಕೋರ್ಸ್‌ಗಳನ್ನು ಆರಂಭಿಸಬೇಕು. ಈ ನಿಟ್ಟಿನಲ್ಲಿ ತಜ್ಞರ ಸಮಿತಿ ರಚಿಸಬೇಕು ಎಂದು ಮಂಡ್ಯ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯರೂ ಆದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.
ನಗರದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಎರಡನೇ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ಶಿಕ್ಷಣಕ್ಕಷ್ಟೆ ಸೀಮಿತವಾದರೆ ವಿದ್ಯಾರ್ಥಿಗಳೂ ಆಸಕ್ತಿ ತೋರುವುದಿಲ್ಲ. ದಾಖಲಾತಿ ಕುಸಿದು ವಿವಿಗೂ ಹಿನ್ನಡೆ ಆಗಲಿದೆ. ಈಗಾಗಲೇ ಕೆಲವು ಕೋರ್ಸ್‌ಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಸೀಮಿತವಾಗಿದೆ. ಮುಂದಿನ ದಿನಗಳಲ್ಲಿ ಸಂಶೋಧನಾ ಚಟುವಟಿಕೆಗಳು ಕಷ್ಟ ಎನ್ನುವಂತಹ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳು ಹೊಸದನ್ನು ಕಲಿಯಬೇಕು. ಕಲಿಕೆ ಅವರ ಬದುಕನ್ನು ಕಟ್ಟಿಕೊಳ್ಳುವಂತಿರಬೇಕು. ಆದ್ದರಿಂದ ಹೊಸ ಕೋರ್ಸ್‌ಗಳ ಆರಂಭ ಆಗಬೇಕು. ಹಾಗಾಗಿ, ತಜ್ಞರ ಸಮಿತಿ ರಚಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಸೆ.13ರಂದು ಘಟಿಕೋತ್ಸವ: ವಿಶ್ವವಿದ್ಯಾಲಯದ ಮೊದಲ ಮತ್ತು ಎರಡನೇ ವಾರ್ಷಿಕ ಘಟಿಕೋತ್ಸವವನ್ನು ಸೆ.13ರಂದು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮಂಡ್ಯ ವಿವಿ ಆಗಿ ರಚನೆಗೊಂಡ ನಂತರ ನಡೆಯುತ್ತಿರುವ ಪ್ರಥಮ ಘಟಿಕೋತ್ಸವ ಇದಾಗಿರುವುದರಿಂದ ಅರ್ಥಪೂರ್ಣ, ಅಚ್ಚುಕಟ್ಟಾಗಿ ಮತ್ತು ವಿಜೃಂಭಣೆಯಿಂದ ಆಯೋಜಿಸಬೇಕು ಎಂದು ಸೂಚಿಸಿದರು.
ದಾನಿಗಳು ಸ್ಥಾಪಿಸಿರುವ ದತ್ತಿಗಳಿಂದ ಬಹುಮಾನಗಳನ್ನು ನೀಡುವುದರಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಸಿಗಲಿದೆ. ಶೈಕ್ಷಣಿಕವಾಗಿಯೂ ನೆರವಾಗಲಿದೆ ಎಂದರು. ಸಾಕಷ್ಟು ದಾನಿಗಳು ದತ್ತಿ ನಿಧಿ ಸ್ಥಾಪಿಸಲು ಮುಂದೆ ಬರುತ್ತಾರೆ. ಅಂತಹವರ ನೆರವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿವಿ ಕುಲಸಚಿವ (ಮೌಲ್ಯಮಾಪನ)(ಪ್ರಭಾರ) ಡಾ.ಯೋಗನರಸಿಂಹಚಾರಿ ಮಾತನಾಡಿ, 2019-22 ಮತ್ತು 2020-23ನೇ ಶೈಕ್ಷಣಿಕ ಸಾಲುಗಳ ಒಟ್ಟು 1,457 ಸ್ನಾತಕ ವಿದ್ಯಾರ್ಥಿಗಳು ಹಾಗೂ 2019-20, 2020-21 ಮತ್ತು 2021-22ನೇ ಶೈಕ್ಷಣಿಕ ಸಾಲುಗಳ ಒಟ್ಟು 645 ಸ್ನಾತಕೋತ್ತರ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 2,102 ಅರ್ಹ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಗಳನ್ನು ಪಡೆಯಲು ಅರ್ಹರಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಅಲ್ಲದೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರ‌್ಯಾಂಕ್ ಪ್ರದಾನ ಮಾಡಲು ಮೈಸೂರು ವಿ.ವಿ ಅಳವಡಿಸಿಕೊಂಡಿರುವ ನಿಯಮಗಳನ್ನೇ ಮಂಡ್ಯ ವಿ.ವಿ ಯಲ್ಲೂ ಅಳವಡಿಸಿಕೊಳ್ಳಲು ಹಾಗೂ ಸರ್ಕಾರಿ ಮಹಾವಿದ್ಯಾಲಯದ (ಸ್ವಾಯತ್ತ) ಎಲ್ಲ ದತ್ತಿಗಳನ್ನು ಮಂಡ್ಯ ವಿಶ್ವವಿದ್ಯಾಲಯಕ್ಕೆ ವರ್ಗಾವಣೆಗೊಂಡಿರುವುದರಿಂದ ಮಂಡ್ಯ ವಿಶ್ವವಿದ್ಯಾಲಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನವಾಗಿ ಘಟಿಕೋತ್ಸವದಲ್ಲಿ ಪ್ರದಾನ ಮಾಡುವುದಕ್ಕೆ ಅನುಮೋದನೆ ಕೋರಿದರು. ಇದಕ್ಕೆ ಸಭೆ ಸರ್ವಾನುಮತದಿಂದ ಅನುಮೋದಿಸಿತು.
ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಮಂಡ್ಯ ವಿವಿಯು ಸಂಯೋಜಿತ ವಿ.ವಿ. ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಮೊದಲನೇ ವರ್ಷದ ವಿದ್ಯಾರ್ಥಿಗಳು ಮಾತ್ರ ಮಂಡ್ಯ ವಿವಿ ವ್ಯಾಪ್ತಿಗೆ ಬರುತ್ತಾರೆ. 2024-25ನೇ ಶೈಕ್ಷಣಿಕ ಸಾಲಿನಿಂದ ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಬರುವುದರಿಂದ ಮಾಂಡವ್ಯ ವಲಯ ಕ್ರೀಡಾಕೂಟ ಆಯೋಜಿಸುವ ಸಂಬಂಧ ದೈಹಿಕ ಶಿಕ್ಷಣ ನಿರ್ದೇಶಕರ ನೇತೃತ್ವದಲ್ಲಿ ಸಮಿತಿ ರಚಿಸಲು ಸಭೆಯ ಅನುಮೋದನೆ ಕೋರಿದರು. ಇದಕ್ಕೆ ಸಭೆ ಒಪ್ಪಿತು.
ಅಲ್ಲದೆ, ಜಿಲ್ಲೆಯ ಸಮಗ್ರ ಇತಿಹಾಸ, ಸಾಹಿತ್ಯ, ಜಾನಪದ, ವಿದ್ವಾಂಸರು, ಸ್ವಾತಂತ್ರ್ಯ, ಕೃಷಿ, ನೀರಾವರಿ, ಸಾಮಾಜಿಕ, ಆರ್ಥಿಕ ಐತಿಹ್ಯ ಒಳಗೊಂಡ ಮಂಡ್ಯ ವಿವಿ ಗೀತೆ ಹಾಗೂ ’ವಿವಿ ಆವರಣ’ಕ್ಕೆ ಸೂಕ್ತ ಹೆಸರನ್ನು ಸೂಚಿಸಲು ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ಬಂದಿದೆ. ಈ ಸಂಬಂಧ ವಿ.ವಿ. ಹಂತದಲ್ಲಿ ಸಮಿತಿ ರಚಿಸಿದ್ದು, ಅಂತಿಮಗೊಳಿಸುವ ಕೆಲಸ ನಡೆದಿದೆ ಎಂದು ಹೇಳಿದರು.
ಸಭೆಯಲ್ಲಿ ಕುಲಸಚಿವ(ಆಡಳಿತ) ಡಾ.ಶಿವಚಿತ್ತಪ್ಪ, ಹಣಕಾಸು ಅಧಿಕಾರಿ ಡಾ.ಪಿ.ಮನೋಹರ್, ಸಿಂಡಿಕೇಟ್ ಸದಸ್ಯರಾದ ಡಾ.ಎಸ್.ಎಲ್.ಸುರೇಶ್, ಸಿ.ಜಯರಾಮು, ಕೆ.ಶಿವಶಂಕರ್, ಬಿ.ರಾಜಣ್ಣ, ಕೆ.ಟಿ.ಅಪ್ಪಾಜಪ್ಪ, ಎಂ.ಸಿ.ಸತೀಶ್‌ಬಾಬು, ನಾಗರಾಜು ಇತರರಿದ್ದರು.