ಸೀಟು ಕೊಡಿಸುವುದಾಗಿ ನಂಬಿಸಿ ವಂಚಿಸಿದವ ಅರೆಸ್ಟ್

15Manju5
ಬೆಳಗಾವಿ ನಗರದ ಮಾರ್ಕೆಟ್ ಠಾಣೆ ಪೊಲೀಸರು ಬಂಧಿತನಿಂದ ಕಂಪ್ಯೂಟರ್ ಮಾನಿಟರ್, ಲ್ಯಾಪ್‌ಟಾಪ್, ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿರುವುದು.
Published on

ಬೆಳಗಾವಿ: ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಮಾರ್ಕೆಟ್ ಠಾಣೆ ಪೊಲೀಸರು ಈಚೆಗೆ ಬಂಧಿಸಿದ್ದು, 12 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ.

ಮೂಲತಃ ತೆಲಂಗಾಣ ರಾಜ್ಯದ ಅರವಿಂದ ಅಲಿಯಾಸ್ ಅರುಣಕುಮಾರ ಅರಗೊಂಡ (47) ಬಂಧಿತ. ಎಂಬಿಎಸ್‌ಎಸ್‌ಗಾಗಿ ನೀಟ್ ಪರೀಕ್ಷೆ ಕುಳಿತವರ ಬಯೋಡೇಟಾ ಪಡೆಯುತ್ತಿದ್ದ. ಬಳಿಕ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದವರನ್ನು ಸಂಪರ್ಕ ಮಾಡಿ ಹಣ ಕೊಟ್ಟರೆ ಸರ್ಕಾರದ ಕೋಟಾದಡಿ ಎಂಬಿಬಿಎಸ್ ಸೀಟ್ ಮಾಡಿಸಿಕೊಡುತ್ತೇನೆ ಎಂದು ನಂಬಿಸುತ್ತಿದ್ದ. ಅದೇ ರೀತಿ ನಂಬಿಸಿ ಹತ್ತು ಜನರಿಂದ 1.30 ಕೋಟಿ ರೂ. ಪಡೆದು ಪರಾರಿಯಾಗಿದ್ದ. ಅರುಣಕುಮಾರ ಎಂದು ಹೆಸರು ಬದಲಾಯಿಸಿಕೊಂಡಿದ್ದ. ಈ ಕುರಿತು ಬೀದರ ಜಿಲ್ಲೆಯ ಅಸ್ಟಿಯಾಬೇಗಂ ಮೊಹ್ಮದತಜಮುಲ್ ಅಹ್ಮದೆ ಎಂಬುವರು 2023ರ ನವೆಂಬರ್ 28ರಂದು ಮಾರ್ಕೆಟ್ ಠಾಣೆಗೆ ದೂರು ನೀಡಿದ್ದರು.

ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಆರೋಪಿಯ ಬೆನ್ನತ್ತಿದ್ದರು. ಮೊಬೈಲ್ ನೆಟವರ್ಕ್ ಟ್ರೇಸ್ ಮಾಡುವ ಜತೆಗೆ ತೆಲಂಗಾಣ ಸೇರಿ ಎಲ್ಲ ನೀಟ್ ಕೋಚಿಂಗ್ ಕೇಂದ್ರಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದರು. 2024ರ ಜೂನ್ 28ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಬಂಧಿಸಿದ್ದಾರೆ. ಆತನ ಬಳಿ ಇದ್ದ 12 ಲಕ್ಷ ರೂ. ನಗದು ಸೇರಿ ಐದು ಮೊಬೈಲ್, ಮೂರು ಡೆಬಿಟ್ ಕಾರ್ಡ್‌ಗಳು, 15 ಕಂಪ್ಯೂಟರ್‌ಗಳು, ಒಂದು ಲ್ಯಾಪ್‌ಟಾಪ್ ಜಪ್ತಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದುಕೊಂಡಿದ್ದ ಸುಮಾರು 120ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟ್ ಕೊಡಿಸುವುದಾಗಿ ನಂಬಿಸಿದ್ದ. ಅದರಲ್ಲಿ ಹತ್ತು ಜನರು ಲಕ್ಷ ಲಕ್ಷ ರೂ. ನೀಡಿದ್ದರು. ಆದರೆ, ಎಂಬಿಬಿಎಸ್ ಸೀಟ್ ಕೊಡಿಸದೆ ಆರೋಪಿ ನಾಪತ್ತೆಯಾಗಿದ್ದ. ಬಂಧಿತ ವ್ಯಕ್ತಿ ಮೇಲೆ ತೆಲಂಗಾಣದಲ್ಲಿ 6, ಬೆಂಗಳೂರಿನ ಆರ್‌ಟಿ ನಗರ, ಅಶೋಕ ನಗರದಲ್ಲಿ ತಲಾ ಒಂದೊಂದು ಕೇಸ್, ಮಧ್ಯಪ್ರದೇಶದ ಭೂಪಾಲ್‌ನಲ್ಲಿ ವಂಚನೆ ಕೇಸ್ ದಾಖಲಾಗಿವೆ. ಆರೋಪಿಯು ಮುಂಬೈನಲ್ಲಿ ಅದ್ವಯ ವಿದ್ಯಾ ಪ್ರವೇಶ ಮಾರ್ಗದರ್ಶಕ ಪ್ರೈ.ಲಿ. ಹೆಸರಿನಲ್ಲಿ ನೀಟ್ ಕೌನ್ಸೆಲಿಂಗ್ ಕಚೇರಿಯನ್ನೂ ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net